ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಮೀನುಗಾರ ಸಮಾಜದ ಹಿರಿಯ ಮುಖಂಡ, ಸಮಾಜ ಸೇವಕ ಹಾಗೂ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ನ ಮಾಜಿ ಅಧ್ಯಕ್ಷ ಕೆ.ಟಿ. ತಾಂಡೇಲ್ (84) ಅವರು ಮಂಗಳವಾರ ನಿಧನರಾದರು.
ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
ಕೆ.ಟಿ. ತಾಂಡೇಲ್ ಅವರು ಜಿಲ್ಲಾ ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ಮೀನುಗಾರರ ಅಭಿವೃದ್ಧಿಗೆ ಶ್ರಮಿಸಿದ್ದರು. ಕಾರವಾರ-ಅಂಕೋಲಾ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮೀನುಗಾರಿಕೆ ಸಹಕಾರಿ ಸಂಘಗಳ ಸ್ಥಾಪನೆಗೆ ಪ್ರಮುಖ ಪಾತ್ರ ವಹಿಸಿದ್ದರು. ಮೀನುಗಾರಿಕೆ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು ಬೈತಖೋಲ ಮೀನುಗಾರಿಕೆ ಬಂದರು ಅಭಿವೃದ್ಧಿಗೂ ಅಪಾರವಾಗಿ ಶ್ರಮಿಸಿದ್ದರು.
ಸಾಗರಮಾಲಾ ಯೋಜನೆ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಅವರು, ಮೀನುಗಾರರ ಹಕ್ಕುಗಳಿಗಾಗಿ ನಡೆದ ಹೋರಾಟಕ್ಕೆ ನಾಯಕತ್ವ ನೀಡಿ ಸಮುದಾಯದಲ್ಲಿ ಧೈರ್ಯ ತುಂಬಿದ್ದರು. ಅಲ್ಲದೆ ಸಾಗರ ದರ್ಶನ ಕಲ್ಯಾಣ ಮಂಟಪದ ಸಂಸ್ಥಾಪಕ ಅಧ್ಯಕ್ಷರಾಗಿ ಹಾಗೂ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೀನುಗಾರರ ಹಲವು ಸಂಘ-ಸಂಸ್ಥೆಗಳ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಕೆ.ಟಿ. ತಾಂಡೇಲ್ ಅವರ ನಿಧನಕ್ಕೆ ಶಾಸಕ ಸತೀಶ್ ಸೈಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಪ್ರಶಾಂತ ತಾಂಡೇಲ್ ಸೇರಿದಂತೆ ಮೀನುಗಾರ ಸಮಾಜದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.


