ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ಕುಟುಂಬದ ಜೀವನ ಸಾಗಿಸಲು ದುಡಿಮೆಯ ನಡುವೆ ಮಾವಿನ ಹಣ್ಣು ಕೀಳಲು ಮರ ಏರಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಕೆಳಗೆ ಬಿದ್ದು, ಹಲವು ದಿನಗಳ ಜೀವನ್ಮರಣ ಹೋರಾಟದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.

ಬನವಾಸಿ ಸಮೀಪದ ಕಡಗೋಡ ಗ್ರಾಮದ ವೀರಭದ್ರಪ್ಪ ನಿಂಗಪ್ಪ ಮಾರಿನಬಿಡ (48) ಮೃತ ದುರ್ದೈವಿ. ಜೂನ್ 5ರಂದು ಮಧ್ಯಾಹ್ನ, ಗ್ರಾಮದ ಅಶೋಕ ಗಣಪತಪ್ಪ ಗೌಡ ಅವರ ಮನೆಯ ಹಿಂಭಾಗದಲ್ಲಿದ್ದ ಮಾವಿನ ಮರಕ್ಕೆ ಹಣ್ಣು ಕೀಳಲು ಹೋಗಿದ್ದ ಅವರು, ಮರದ ಮೇಲಿಂದ ಏಕಾಏಕಿ ಆಯತಪ್ಪಿ ಕೆಳಗೆ ಬಿದ್ದಿದ್ದರು. ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿದ್ದವು.

ಇದನ್ನೂ ಓದಿ:ವಿಡಿಯೋ ನೋಡಿ: ಬಾವಿಗೆ ಬಿದ್ದ ಚಿರತೆಯ ರೋಚಕ ರಕ್ಷಣೆ!

https://karavalivoice.in/watch-video-dramatic-rescue-of-a-leopard-trapped-in-a-well/

ತಕ್ಷಣ ಸ್ಥಳೀಯರು ಹಾಗೂ ಕುಟುಂಬಸ್ಥರು 108 ಅಂಬ್ಯುಲೆನ್ಸ್ ಮೂಲಕ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ವೈದ್ಯರ ಎಲ್ಲಾ ಪ್ರಯತ್ನಗಳ ನಡುವೆಯೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಘಟನೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ದುಃಖದ ವಾತಾವರಣ ಮೂಡಿಸಿದ್ದು, ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

 

 

Please Share: