ಕರಾವಳಿ ವಾಯ್ಸ್ ನ್ಯೂಸ್ 

ಭಟ್ಕಳ: ಆಹಾರ ಅರಸಿಕೊಂಡು ಗ್ರಾಮಕ್ಕೆ ಬಂದಿದ್ದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಯಲ್ವಡಿಕವೂರ ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸಮಯೋಚಿತ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Banner Ad

ಗ್ರಾಮದ ನಾರಾಯಣ ನಾಯ್ಕ ಅವರ ಮನೆಯ ಬಾವಿಯಲ್ಲಿ ಚಿರತೆ ಬಿದ್ದಿತ್ತು. ಚಿರತೆಯ ಚೀರಾಟ ಕೇಳಿ ಮನೆಯವರು ಬಾವಿಯೊಳಗೆ ಇಣುಕಿ ನೋಡಿದಾಗ ಚಿರತೆ ಇರುವುದನ್ನು ಗಮನಿಸಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಬಾವಿಗೆ ಬಲೆ ಇಳಿಸಿ ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಬೋನಿಗೆ ಸೇರಿಸಲಾಯಿತು. ಬಳಿಕ ಆರೋಗ್ಯ ಪರಿಶೀಲನೆ ನಡೆಸಿ ಸಮೀಪದ ಅರಣ್ಯ ಪ್ರದೇಶಕ್ಕೆ ಚಿರತೆಯನ್ನು ಬಿಡಲಾಯಿತು.

ಘಟನೆಯ ವೇಳೆ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆಯನ್ನು ಕಣ್ತುಂಬಿಕೊಂಡರು.

 

 

Please Share: