ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ತಾಲೂಕಿನ ಕಡವಾಡ ಗ್ರಾಮದಲ್ಲಿರುವ ಸುಮಾರು ಆರು ದಶಕಗಳ ಇತಿಹಾಸ ಹೊಂದಿದ್ದ ಹಳೆಯ ಸೇತುವೆ ಸೋಮವಾರ ರಾತ್ರಿ ಸುರಿದ ಭಾರೀ ಮಳೆ ಹಾಗೂ ಗಾಳಿಯ ಅಬ್ಬರಕ್ಕೆ ಕುಸಿದು ಬಿದ್ದಿದೆ. ಹಲವು ವರ್ಷಗಳಿಂದ ಸ್ಥಳೀಯರ ಬದುಕಿನ ಭಾಗವಾಗಿದ್ದ ಈ ಸೇತುವೆಯ ಕುಸಿತ ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.

Banner Ad

ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಂದ ಉದ್ಘಾಟನೆಗೊಂಡಿದ್ದ ಈ ಸೇತುವೆ, ಕಡವಾಡ ಭಾಗದ ಜನರ ದೈನಂದಿನ ಸಂಚಾರಕ್ಕೆ ಪ್ರಮುಖ ಸಂಪರ್ಕ ಮಾರ್ಗವಾಗಿತ್ತು. ಕಾಲಕ್ರಮೇಣ ಸೇತುವೆ ದುರ್ಬಲಗೊಂಡ ಹಿನ್ನೆಲೆಯಲ್ಲಿ ವಾಹನ ಹಾಗೂ ಸಾರ್ವಜನಿಕ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೂ ಸ್ಥಳೀಯ ಮೀನುಗಾರರ ಪಾಲಿಗೆ ಇದು ಇನ್ನೂ ಜೀವಂತ ನೆನಪಿನ ತಾಣವಾಗಿಯೇ ಉಳಿದಿತ್ತು.

ಕಾಳಿ ನದಿಯ ಮೇಲ್ಭಾಗದಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ, ಮೀನುಗಾರಿಕೆಗೆ ಸೂಕ್ತ ಸ್ಥಳವೆಂದು ಪ್ರಸಿದ್ಧಿಯಾಗಿತ್ತು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ನೂರಾರು ಮೀನುಗಾರರು ಸೇತುವೆ ಮೇಲೆ ನಿಂತು ಮೀನುಗಾರಿಕೆ ನಡೆಸುತ್ತಿದ್ದರು. ಮಳೆಗಾಲದಲ್ಲಿಯೂ ಇಲ್ಲಿ ಮೀನುಗಾರರ ಚಟುವಟಿಕೆ ಸಾಮಾನ್ಯವಾಗಿತ್ತು.

ಸ್ಥಳೀಯರ ಪ್ರಕಾರ, “ಸೇತುವೆ ಸಂಚಾರಕ್ಕೆ ಮುಚ್ಚಿದ್ದರೂ ಮೀನುಗಾರರ ಬದುಕಿಗೆ ಅದು ದೊಡ್ಡ ಆಸರೆಯಾಗಿತ್ತು. ಹಲವು ಕುಟುಂಬಗಳ ದಿನನಿತ್ಯದ ಜೀವನ ಈ ಸೇತುವೆ ಸುತ್ತಲೇ ಸಾಗುತ್ತಿತ್ತು” ಎಂದು ತಿಳಿಸಿದ್ದಾರೆ.

ಭಾರೀ ಮಳೆಯ ಪರಿಣಾಮ ಸೇತುವೆಯ ಮಧ್ಯಭಾಗ ಸಂಪೂರ್ಣ ಕುಸಿದಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕರು ಸೇತುವೆ ಬಳಿ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

 

Please Share: