ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ: ತಾಲೂಕಿನ ಅಂಬೆವಾಡಿಯ ಜಿ ಪ್ಲಸ್ ಟು ಮನೆಗಳ ಸಮೀಪ ಗುರುವಾರ ರಾತ್ರಿ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಗುರುವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಮೊಸಳೆ ಓಡಾಡುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಕೆಲವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಮೊಸಳೆಯ ಓಡಾಟವನ್ನು ಸೆರೆಹಿಡಿದಿದ್ದಾರೆ. ಜನವಸತಿ ಪ್ರದೇಶದ ಸಮೀಪವೇ ಮೊಸಳೆ ಕಾಣಿಸಿಕೊಂಡಿರುವುದರಿಂದ ನಿವಾಸಿಗಳು ಆತಂಕಗೊಂಡಿದ್ದಾರೆ.
ರಾತ್ರಿ ವೇಳೆ ಮನೆಯಿಂದ ಹೊರಬರುವಾಗ ನಿವಾಸಿಗಳು ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಮೊಸಳೆ ಜನವಸತಿ ಪ್ರದೇಶದ ಸಮೀಪಕ್ಕೆ ಹೇಗೆ ಬಂದಿದೆ ಹಾಗೂ ಸದ್ಯ ಅದು ಎಲ್ಲಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಮೊಸಳೆಯನ್ನು ಸುರಕ್ಷಿತವಾಗಿ ಸೆರೆಹಿಡಿದು ಜನವಸತಿ ಪ್ರದೇಶದಿಂದ ದೂರ ಕೊಂಡೊಯ್ಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


