ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ನಗರದ ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಗುರುವಾರ ಬೆಳಿಗ್ಗೆ ಅಲೆಯ ಅಬ್ಬರಕ್ಕೆ ಸಿಲುಕಿದ್ದ ಇಬ್ಬರು ಪ್ರವಾಸಿಗರನ್ನು ಸ್ಥಳೀಯ ಯುವಕರು ಸಾಹಸದಿಂದ ರಕ್ಷಿಸಿದ ಘಟನೆ ನಡೆದಿದೆ.

ಬೆಳಿಗ್ಗೆ ಕಡಲ ತೀರಕ್ಕೆ ಬಂದಿದ್ದ ಇಬ್ಬರು ಪ್ರವಾಸಿಗರು ಸಮುದ್ರಕ್ಕೆ ಇಳಿದ ವೇಳೆ ಅಲೆಗಳ ತೀವ್ರತೆಗೆ ಸಿಲುಕಿ ಮುಳುಗುವ ಸ್ಥಿತಿಗೆ ತಲುಪಿದ್ದರು. ಇದನ್ನು ಗಮನಿಸಿದ ಸ್ಥಳೀಯ ಯುವಕರು ಕ್ಷಣಮಾತ್ರವೂ ವಿಳಂಬ ಮಾಡದೆ ಸಮುದ್ರಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು.

ಆ ವೇಳೆ ಕಡಲ ತೀರದಲ್ಲಿ ಕ್ರಿಕೇಟ್ ಆಡುತ್ತಿದ್ದ ಗೌತಮ್ ಬಾನಾವಳಿ, ಸಾಯಿನಾಥ್, ವಿಘ್ನೇಶ್, ಅಮನ್ ಹಾಗೂ ಅಜಯ್ ಎಂಬ ಯುವಕರು ಸಮುದ್ರಕ್ಕೆ ಇಳಿದು ಅಪಾಯದಲ್ಲಿದ್ದ ಇಬ್ಬರನ್ನು ಸುರಕ್ಷಿತವಾಗಿ ಕರಾವಳಿಗೆ ಕರೆತಂದರು.

ಯುವಕರ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸ್ಥಳೀಯರು ಯುವಕರ ಸಾಹಸವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಡಲ ತೀರಕ್ಕೆ ಬರುವ ಪ್ರವಾಸಿಗರು ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನಲೆಯಲ್ಲಿ ಪ್ರವಾಸಿಗರು ಸುರಕ್ಷತಾ ಸೂಚನೆಗಳನ್ನು ಪಾಲಿಸಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ.

 

 

Please Share: