ಕರಾವಳಿ ವಾಯ್ಸ್ ನ್ಯೂಸ್ 

ಕುಮಟಾ: ಮೊಬೈಲ್ ಖರೀದಿಸಿದ ಬಳಿಕ ಹಣ ಪಾವತಿಸಿದ್ದೇನೆಂದು ನಕಲಿ PhonePe ಸಂದೇಶ ತೋರಿಸಿ ₹16,700 ಮೌಲ್ಯದ ಮೊಬೈಲ್ ಪಡೆದುಕೊಂಡು ಪರಾರಿಯಾದ ಆರೋಪದಡಿ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Banner Ad

ಕುಮಟಾ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮಾತೋಶ್ರೀ ಏಜೆನ್ಸಿಸ್ ಮೊಬೈಲ್ ಅಂಗಡಿಯಲ್ಲಿ ಘಟನೆ ನಡೆದಿದೆ. ಈ ಕುರಿತು ಕೂಜಳ್ಳಿ ನಿವಾಸಿ ಧನಂಜಯ ಮಂಜುನಾಥ ನಾಯ್ಕ (27) ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಸೆ.10ರಂದು ಮಧ್ಯಾಹ್ನ 2.50ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಗ್ರಾಹಕನಂತೆ ಅಂಗಡಿಗೆ ಬಂದು Realme C100X Deep Blue (4GB/64GB) ಮೊಬೈಲ್ ಖರೀದಿಸಿದ್ದಾನೆ. ಮೊಬೈಲ್‌ನ ₹16,700 ಹಣವನ್ನು PhonePe ಮೂಲಕ ಪಾವತಿಸಿದ್ದೇನೆಂದು ನಕಲಿ ಪಾವತಿ ಸಂದೇಶ ತೋರಿಸಿ, ಅಂಗಡಿಯವರನ್ನು ನಂಬಿಸಿ ಮೊಬೈಲ್ ಪಡೆದುಕೊಂಡು ತೆರಳಿದ್ದಾನೆ ಎನ್ನಲಾಗಿದೆ.

ನಂತರ ಪರಿಶೀಲಿಸಿದಾಗ ಹಣ ಖಾತೆಗೆ ಜಮೆಯಾಗದಿರುವುದು ಗಮನಕ್ಕೆ ಬಂದಿದ್ದು, ನಕಲಿ ಪಾವತಿ ಸಂದೇಶ ತೋರಿಸಿ ಮೋಸ ಮಾಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಕುಮಟಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 188/2026, ಬಿ.ಎನ್.ಎಸ್. ಕಲಂ 319(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತನ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

ಜಾಹೀರಾತು ಸಂದೇಶ

 

Please Share: