ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕಾವೇರಿ ನದಿಯಲ್ಲಿ ನಡೆದ ದಸರಾ ಜಲಸಾಹಸ ಕ್ರೀಡಾಕೂಟದಲ್ಲಿ ಕಾರವಾರದ ಯುವ ಪ್ರತಿಭೆಗಳು ಪದಕಗಳ ಬೇಟೆಯಾಡಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

Banner Ad

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜೇತ್ನ (ಜನರಲ್ ತಿಮ್ಮಯ್ಯ ಸಾಹಸ ಕ್ರೀಡೆ ಅಕಾಡೆಮಿ) ಸಹಯೋಗದಲ್ಲಿ ಶ್ರೀರಂಗಪಟ್ಟಣದ ಮಯೂರ ಯಾತ್ರಿನಿವಾಸ್ ಬಳಿಯ ಕಾವೇರಿ ನದಿಯಲ್ಲಿ ಕಾಯಾಕಿಂಗ್ ಮತ್ತು ರಿವರ್ ರಾಫ್ಟಿಂಗ್ ಸ್ಪರ್ಧೆಗಳು ನಡೆಯಿತು.

ಸದಾಶಿವಗಡದ ಜಲಸಾಹಸ ಕ್ರೀಡಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಕಾರವಾರ ತಂಡವು ತರಬೇತುದಾರ ಪ್ರಕಾಶ ಹರಿಕಂತ್ರ ಅವರ ಮಾರ್ಗದರ್ಶನದಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದೆ.

ವಿಶಾಕಾ ಬಿಗಿನರ್ಸ್ ಅಂಡರ್‌-18 ಬಾಲಕಿಯರ ಕಾಯಾಕಿಂಗ್‌ನಲ್ಲಿ ಚಿನ್ನ, ಮಹಿಳಾ ರಿವರ್ ರಾಫ್ಟಿಂಗ್‌ನಲ್ಲಿ ಬೆಳ್ಳಿ ಪಡೆದರು. ವಿಯೋನಾ ಕಾಯಾಕಿಂಗ್‌ನಲ್ಲಿ ಬೆಳ್ಳಿ, ರಾಫ್ಟಿಂಗ್‌ನಲ್ಲಿ ಕಂಚು; ಸಾಚಿ ಎರಡೂ ವಿಭಾಗಗಳಲ್ಲಿ ಕಂಚು ಗೆದ್ದರು. ಮೊಹಮ್ಮದ್ ಹೈಮದ್ ಬಿಗಿನರ್ಸ್ ಅಂಡರ್‌-18 ಬಾಲಕರ ಕಾಯಾಕಿಂಗ್‌ನಲ್ಲಿ ಚಿನ್ನ, ಶಾನ್ ಬೆಳ್ಳಿ ಪಡೆದರು.

ಧನರಾಜ್ ಅಂಡರ್‌-18 ಪ್ರೊ ಬಾಲಕರ ಕಾಯಾಕಿಂಗ್ ಕ್ರಾಸ್‌ನಲ್ಲಿ ಚಿನ್ನ, ಪೃಥ್ವಿರಾಜ್ ಬಿಗಿನರ್ಸ್ ಹಾಗೂ ಪ್ರೊ ವಿಭಾಗಗಳಲ್ಲಿ ಬೆಳ್ಳಿ ಪಡೆದರು. ಸ್ನೇಹಾ ಅಂಡರ್‌-18 ಪ್ರೊ ಬಾಲಕಿಯರ ಕಾಯಾಕಿಂಗ್ ಕ್ರಾಸ್‌ನಲ್ಲಿ ಬೆಳ್ಳಿ ಮತ್ತು ಮಹಿಳಾ ರಾಫ್ಟಿಂಗ್‌ನಲ್ಲಿ ಕಂಚು ಗೆದ್ದರು. ರಾಜೇಶ್ವರಿ ಬಿಗಿನರ್ಸ್ ಮಹಿಳಾ ಕಾಯಾಕಿಂಗ್‌ನಲ್ಲಿ ಕಂಚು, ದೀಪಾ ಬೆಳ್ಳಿ ಹಾಗೂ ವಿನಯ್ ಬಿಗಿನರ್ಸ್ ಪುರುಷರ ಕಾಯಾಕಿಂಗ್‌ನಲ್ಲಿ ಕಂಚು ಪಡೆದರು.

ಪುರುಷರ ರಿವರ್ ರಾಫ್ಟಿಂಗ್‌ನಲ್ಲಿ ಪ್ರಸಾದ್, ಮೆಹಬೂಬ್, ಸುಮಿತ್ ಹಾಗೂ ಗುರು ಪದಕಗಳನ್ನು ತಮ್ಮದಾಗಿಸಿಕೊಂಡರು. ಧನರಾಜ್ ಹಾಗೂ ಪೃಥ್ವಿರಾಜ್ ಕೂಡ ಈ ವಿಭಾಗದಲ್ಲಿ ಭಾಗವಹಿಸಿದ್ದರು.

ಕ್ರೀಡಾಪಟುಗಳ ಸಾಧನೆಗೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯ್ಕ ಹಾಗೂ ತರಬೇತುದಾರ ಪ್ರಕಾಶ ಹರಿಕಂತ್ರ ಹರ್ಷ ವ್ಯಕ್ತಪಡಿಸಿ, ವಿಜೇತರನ್ನು ಅಭಿನಂದಿಸಿದ್ದಾರೆ.

 

 

 

 

Please Share: