ಕರಾವಳಿ ವಾಯ್ಸ್ ನ್ಯೂಸ್ 

ಹಳಿಯಾಳ: ತಾಲೂಕಿನ ಸಂಕನಕೊಪ್ಪ ಗ್ರಾಮದ ರೈತರೊಬ್ಬರ ಬೈಕ್ ಕಳವು ಪ್ರಕರಣವನ್ನು ಹಳಿಯಾಳ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಕಳುವಾಗಿದ್ದ ₹50 ಸಾವಿರ ಮೌಲ್ಯದ ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ.

Banner Ad

ಬಂಧಿತ ಆರೋಪಿಗಳನ್ನು ಕಲಘಟಗಿ ತಾಲೂಕಿನ ಜೋಡಳ್ಳಿ ಗ್ರಾಮದ ಪ್ರವೀಣ ದೇವೇಂದ್ರಪ್ಪ ಬಡಿಗೇರ ಹಾಗೂ ಜಿ. ಬಸವಕೊಪ್ಪ ಗ್ರಾಮದ ದೇವರಾಜ ಮಹಾಂತೇಶ ಅಂಬಿಗೇರ ಎಂದು ಗುರುತಿಸಲಾಗಿದೆ.

ಅಕ್ಟೋಬರ್ 26ರಂದು ಹಳಿಯಾಳ ನಗರದ ಎಪಿಎಂಸಿ ಸಮೀಪ ಖಚಿತ ಮಾಹಿತಿ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸಂಕನಕೊಪ್ಪ ಗ್ರಾಮದ ಜಯವಂತ ಯಲ್ಲಪ್ಪ ಮಿರಾಶಿ (51) ಅವರು ಸೆಪ್ಟೆಂಬರ್ 29ರಂದು ಜೋಗನಕೊಪ್ಪ–ಅಮ್ಮನಕೊಪ್ಪ ರಸ್ತೆಯ ಪಕ್ಕದಲ್ಲಿ ತಮ್ಮ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನಿಲ್ಲಿಸಿ, ಹೊಲದಲ್ಲಿ ಗೋವಿನಜೋಳ ಮುರಿಯಲು ತೆರಳಿದ್ದರು. ಮರಳಿ ಬಂದಾಗ ಬೈಕ್ ಕಾಣೆಯಾಗಿತ್ತು. ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಿದ್ದ ಪೊಲೀಸರು, ಕಾರ್ಯಾಚರಣೆ ನಡೆಸಿ ಕಳುವಾಗಿದ್ದ ಬೈಕ್ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಎಸ್ಪಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಗಿರೀಶ್ ಬಿ. ಹಾಗೂ ಸಿಪಿಐ ಭೀಮಣ್ಣ ಸೋರಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಕಿರಣ ಪಾಟೀಲ ಮತ್ತು ಕುಮಾರ ಕಾಂಬಳೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಎಎಸ್‌ಐ ಪ್ರಶಾಂತ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

 

 

 

 

 

Please Share: