ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳ ವ್ಯಾಪ್ತಿಯ 59 ಪ್ರದೇಶಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ರದ್ದಾಗಿರುವ ನ್ಯಾಯಬೆಲೆ ಅಂಗಡಿಗಳ ಸ್ಥಳಗಳು ಹಾಗೂ ದೂರದ ಪ್ರದೇಶಗಳಿಗೆ ಪಡಿತರ ಪಡೆಯಲು ತೆರಳಬೇಕಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಬಂದ ಮನವಿಗಳು ಮತ್ತು ತಹಶೀಲ್ದಾರರ ಪ್ರಸ್ತಾವನೆಗಳನ್ನು ಆಧರಿಸಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯು ಆ.20ರಂದು ನಡೆದ ಸಭೆಯಲ್ಲಿ ಹೊಸ ಅಂಗಡಿಗಳ ಮಂಜೂರಾತಿಗೆ ಅನುಮೋದನೆ ನೀಡಿದೆ. ಸೆ.5ರಂದು ಅಂಕೋಲಾದಲ್ಲಿ ನಡೆದ ಪ್ರಜಾ ಸೇವಾ ಅಭಿಯಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಅರ್ಜಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.
ಕರ್ನಾಟಕ ಅಗತ್ಯ ವಸ್ತುಗಳ (ಸಾರ್ವಜನಿಕ ವಿತರಣಾ ವ್ಯವಸ್ಥೆ) ನಿಯಂತ್ರಣ ಆದೇಶ 2016 ಹಾಗೂ ತಿದ್ದುಪಡಿಗಳನ್ವಯ ಅರ್ಹ ಸಂಘ-ಸಂಸ್ಥೆಗಳು, ಸಹಕಾರ ಸಂಘಗಳು ಹಾಗೂ ಖಾಸಗಿ ವ್ಯಕ್ತಿಗಳು, ವಿಕಲಚೇತನರು ಮತ್ತು ತೃತೀಯಲಿಂಗ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು ಸಂಬಂಧಪಟ್ಟ ತಹಶೀಲ್ದಾರ್ ಕಚೇರಿಯಿಂದ ನಮೂನೆ ‘ಎ’ ಪಡೆದು, ಅಗತ್ಯ ದಾಖಲೆಗಳೊಂದಿಗೆ ಅ.5ರಂದು ಸಂಜೆ 5.30ರೊಳಗೆ ಸಂಬಂಧಪಟ್ಟ ತಾಲೂಕು ತಹಶೀಲ್ದಾರ್ ಕಚೇರಿಯ ಆಹಾರ ಶಾಖೆಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು ಎಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


