ಕರಾವಳಿ ವಾಯ್ಸ್ ನ್ಯೂಸ್
ಬೆಂಗಳೂರು/ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಮೂಲದ ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಭಾರತೀಯ ಚಿತ್ರರಂಗ, ವಿಶೇಷವಾಗಿ ಕನ್ನಡ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆ ಹಾಗೂ ಸುದೀರ್ಘ ಸಿನಿ ಪಯಣಕ್ಕಾಗಿ ಅವರಿಗೆ ಈ ಗೌರವ ಸಂದಿದೆ.
ಅನಂತ್ ನಾಗ್ ಅವರು ಮುಂಬೈನಲ್ಲಿ ಜನಿಸಿದ್ದರೂ, ಅವರ ಕುಟುಂಬದ ಮೂಲ ಉತ್ತರ ಕನ್ನಡದ ಶಿರಾಲಿಯಾಗಿದೆ. ಅವರ ಬಾಲ್ಯದ ಬಹುಭಾಗವೂ ಶಿರಾಲಿಯಲ್ಲಿ ಕಳೆದಿದ್ದು, ಆರಂಭಿಕ ಶಿಕ್ಷಣದ ಕೆಲವು ವರ್ಷಗಳು ಶಿರಾಲಿಯ ಚಿತ್ರಾಪುರ ಮಠದ ಆಶ್ರಯದಲ್ಲಿ ನಡೆದಿವೆ. ಹೀಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕನ್ನಡ ಚಿತ್ರರಂಗದ ಹಿರಿಯ ನಟರೊಬ್ಬರಿಗೆ ದೊರೆತಿರುವುದರ ಜೊತೆಗೆ ಉತ್ತರ ಕನ್ನಡಕ್ಕೂ ಹೆಮ್ಮೆಯ ಕ್ಷಣವಾಗಿದೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಅನಂತ್ ನಾಗ್ ಅವರನ್ನು 2024ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಡಾ. ರಾಜ್‌ಕುಮಾರ್ ಬಳಿಕ ಈ ಪ್ರತಿಷ್ಠಿತ ಗೌರವ ಪಡೆಯುತ್ತಿರುವ ಕನ್ನಡದ ಎರಡನೇ ನಟ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಡಾ. ರಾಜ್‌ಕುಮಾರ್ ಅವರಿಗೆ 1995ರ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿತ್ತು. ಇದೀಗ ಹಲವು ವರ್ಷಗಳ ಬಳಿಕ ಕನ್ನಡದ ಮತ್ತೋರ್ವ ಹಿರಿಯ ನಟ ಅನಂತ್ ನಾಗ್ ಅವರಿಗೆ ಈ ಗೌರವ ದೊರೆತಿದೆ.
ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮರಾಠಿ, ಮಲಯಾಳಂ ಹಾಗೂ ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿರುವ ಅನಂತ್ ನಾಗ್, 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಹಲವು ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಸೆಪ್ಟೆಂಬರ್ 22ರಂದು ಗುಜರಾತ್‌ನ ಏಕ್ತಾ ನಗರ (ಕೆವಾಡಿಯಾ)ದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನವಾಗಲಿದೆ.
ಪ್ರಶಸ್ತಿ ಘೋಷಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಂತ್ ನಾಗ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಅವರ ಸಹಜ ಅಭಿನಯ, ವೈವಿಧ್ಯಮಯ ಪ್ರತಿಭೆ ಹಾಗೂ ಹಲವು ದಶಕಗಳ ಸಿನಿ ಪಯಣವನ್ನು ಶ್ಲಾಘಿಸಿದ್ದಾರೆ.


