Banner Ad

ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಅರಗಾ ಗ್ರಾಮದ ಶ್ರೀ ಅರ್ಘೆಶ್ವರ ಮಹಾದೇವ ದೇವಸ್ಥಾನದ ಸನ್ನಿಧಿಯಲ್ಲಿ ಪುರಾತನ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಈ ಬಾರಿ ಶತಮಾನದ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.

ಸ್ಥಳೀಯರಿಂದ ಆರಂಭಗೊಂಡು ಶ್ರೀ ಮಹಾದೇವ ಪ್ರಸನ್ನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅರಗಾ ಅವರ ನೇತೃತ್ವದಲ್ಲಿ ನಿರಂತರವಾಗಿ ಆಚರಿಸಿಕೊಂಡು ಬರುತ್ತಿರುವ ಈ ಗಣೇಶೋತ್ಸವಕ್ಕೆ ಇದೀಗ 100 ವರ್ಷ ಪೂರ್ಣಗೊಂಡಿದೆ. ಭಾದ್ರಪದ ಶುಕ್ಲ ಚತುರ್ಥಿಯಂದು ದೇವಾಲಯದಲ್ಲಿ ಮೃಣ್ಮಯ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗ್ರಾಮಸ್ಥರೆಲ್ಲರೂ ಪೂಜಿಸುವ ಸಂಪ್ರದಾಯ ಶತಮಾನದಿಂದಲೂ ಮುಂದುವರಿದಿದೆ.

ಈ ಬಾರಿ 12 ದಿನಗಳ ಕಾಲ ಗಣೇಶೋತ್ಸವ ನಡೆಯಲಿದ್ದು, ಮುಂಬೈನ ಪ್ರಸಿದ್ಧ ಲಾಲ್‌ಬಾಗ್ ಗಣಪತಿಯ ಮಾದರಿಯಲ್ಲಿ 4.5 ಅಡಿ ಎತ್ತರದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ರಜತ ಪ್ರಭಾವಳಿಯಿಂದ ಅಲಂಕರಿಸಲ್ಪಟ್ಟ ರಾಜ ಸಿಂಹಾಸನದಲ್ಲಿ ಅರಗಾದ ಮಹಾರಾಜನಂತೆ ಗಣಪತಿ ಕಂಗೊಳಿಸುತ್ತಿದ್ದಾನೆ.

ಗಣಪತಿ ಮೂರ್ತಿ ತಯಾರಿಕೆಯ ಪರಂಪರೆಯೂ ಈ ಉತ್ಸವದ ವಿಶೇಷತೆಯಾಗಿದೆ. ಈ ಹಿಂದೆ ವಾಸುದೇವ ಅರ್ಗೆಕರ ಕುಟುಂಬದವರು ಮೂರ್ತಿ ತಯಾರಿಸುತ್ತಿದ್ದು, ಬಳಿಕ ಅವರ ಪುತ್ರ ಉಮಾಕಾಂತ ಅವರು ಈ ಕಾರ್ಯ ಮುಂದುವರಿಸಿದ್ದರು. ಇದೀಗ ಅವರ ಸಂಬಂಧಿ ಶಿರವಾಡದ ರಮೇಶ ಬೋವಿ ಅವರು ಈ ವರ್ಷದ ಗಣಪತಿ ಮೂರ್ತಿಯನ್ನು ನಿರ್ಮಿಸಿದ್ದಾರೆ.

ಉತ್ಸವದ ಅಂಗವಾಗಿ ಸೆ.17ರಂದು ಸ್ಥಳೀಯ ಕಾರ್ಯಕ್ರಮ ನಡೆಯಲಿದೆ. ಸೆ.18ರಂದು ಸ್ಟಾರ್ ಚಾಯ್ಸ್ ಕಾರವಾರ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಸೆ.19ರಂದು ವಿಷೆಯೇ ಕಲ್ಯಾಣ ಯಕ್ಷಗಾನ ನಡೆಯಲಿದ್ದು, ಸೆ.20ರಂದು ಕುಂದಾಪುರದ ಮಹಾಶಕ್ತಿ ಪಂಜುರ್ಲಿ ತಂಡದ ಅತಿಥಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಸೆ.23ರಂದು ಬುಧವಾರ ಅರಗಾ ಮಹಿಳಾ ಮಂಡಳಿಯಿಂದ ವಿಶೇಷ ಪೂಜೆ ನಡೆಯಲಿದೆ. ಗೋವಾದ ಮಹಿಳಾ ಭಜನಾ ಮಂಡಳಿಯಿಂದ ಗುಮ್ಮಟೆ ಪಾಂಗ್ ರಸದೌತಣ ನಡೆಯಲಿದ್ದು, ರಾತ್ರಿ 11 ಗಂಟೆಗೆ ಭಟ್ಕಳದ ಜೇಂಕಾರ ಮೆಲೋಡಿ ಆರ್ಕೆಸ್ಟ್ರಾದಿಂದ ನೃತ್ಯ, ಗಾನ ಹಾಗೂ ಸಂಗೀತ ಕಾರ್ಯಕ್ರಮವನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅರಗಾ ವತಿಯಿಂದ ಆಯೋಜಿಸಲಾಗಿದೆ.

ಸೆ.24ರಂದು ಗುರುವಾರ ಗ್ರಾಮದ ಶ್ರೇಯೋಭಿವೃದ್ಧಿ ಹಾಗೂ ಸರ್ವ ಭಕ್ತರ ಒಳಿತಿಗಾಗಿ ಶ್ರೀ ಮಹಾಗಣಪತಿ ಹವನ ನಡೆಯಲಿದೆ. ಮಧ್ಯಾಹ್ನ 1.30ರಿಂದ 3.30ರವರೆಗೆ ಅನ್ನಸಂತರ್ಪಣೆ ಹಾಗೂ ರಾತ್ರಿ ಮಹಾಪೂಜೆ ನಡೆಯಲಿದೆ.

ಸೆ.25ರಂದು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮಂಗಲಮೂರ್ತಿಯ ವಿಸರ್ಜನಾ ಮೆರವಣಿಗೆ ವಾದ್ಯ-ಸಂಗೀತದೊಂದಿಗೆ ವಿಜೃಂಭಣೆಯಿಂದ ನಡೆಯಲಿದ್ದು, ಚೆಂಡಿಯ ಕೋಸ್ಟಲ್ ನರ್ಸರಿ ಬಳಿಯ ಕೆರೆಯಲ್ಲಿ ಗಣಪತಿ ಮೂರ್ತಿಯ ವಿಸರ್ಜನೆ ನೆರವೇರಲಿದೆ.

ಉತ್ಸವದಲ್ಲಿ ಶಾಸಕ ಸತೀಶ್ ಸೈಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ, ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹಾಗೂ ಉದ್ಯಮಿ ಜಿ.ಕೆ. ರಾಮ್ ಕುಟುಂಬದವರು ಸೇರಿದಂತೆ ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಆಕಾಶ್ ಬಾಂದೇಕರ ನೇತೃತ್ವದಲ್ಲಿ ಶತಮಾನದ ಸಂಭ್ರಮವನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಗಣಪತಿಯ ಕೃಪೆಗೆ ಪಾತ್ರರಾಗುವಂತೆ ಸಮಿತಿ ಮನವಿ ಮಾಡಿದೆ.

“ಅರಗಾದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಈ ಬಾರಿ 100 ವರ್ಷ ಪೂರ್ಣಗೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಶತಮಾನದ ಈ ಸಂಭ್ರಮವನ್ನು ಸಾಂಪ್ರದಾಯಿಕ ಆಚರಣೆಗಳೊಂದಿಗೆ ವೈಭವಯುತವಾಗಿ ನಡೆಸಲು ಸಮಿತಿ ಸಿದ್ಧತೆ ಮಾಡಿಕೊಂಡಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿದೆ. ಶತಮಾನದ ಈ ವಿಶೇಷ ಗಣೇಶೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗಣಪತಿಯ ಕೃಪೆಗೆ ಪಾತ್ರರಾಗಬೇಕು.”

ಆಕಾಶ್ ಬಾಂದೇಕರ, ಸಮಿತಿಯ ಅಧ್ಯಕ್ಷರು 

 

Please Share: