ಕರಾವಳಿ ವಾಯ್ಸ್ ನ್ಯೂಸ್
ಕಾರವಾರ, ಆ.4: ಅಪಘಾತದಲ್ಲಿ ಗಾಯಗೊಂಡು ಇಲ್ಲಿನ ಕ್ರಿಮ್ಸ್ (ಜಿಲ್ಲಾ ಆಸ್ಪತ್ರೆ)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಲ್ಲಾಪುರದ ಮಂಜುನಾಥನಗರದ ಮಾರ್ಕೋಸ್ ಅವರಿಗೆ ಶಸ್ತ್ರಚಿಕಿತ್ಸೆಗಾಗಿ ಅಗತ್ಯವಿದ್ದ ಅತಿ ವಿರಳವಾದ O-ನೆಗೆಟಿವ್ (O-ve) ರಕ್ತವನ್ನು ವ್ಯವಸ್ಥೆ ಮಾಡುವ ಮೂಲಕ ಪೊಲೀಸ್ ವಾಹನ ಚಾಲಕರೊಬ್ಬರು ಮಾನವೀಯತೆ ಮೆರೆದ ಘಟನೆ ನಡೆದಿದೆ.
ಮಾರ್ಕೋಸ್ ಅವರು ಅಪಘಾತದಲ್ಲಿ ಕೈ ಮುರಿದು ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಗೆ ತುರ್ತಾಗಿ O-ನೆಗೆಟಿವ್ ರಕ್ತದ ಅಗತ್ಯವಿತ್ತು. ರಕ್ತಕ್ಕಾಗಿ ಯಲ್ಲಾಪುರದ ಸತೀಶ ನಾಯ್ಕ, ಸಾಯಿನಾಥ ಉಣಕಲ್, ಮಾರುತಿ ತನೇಕರ್ ಹಾಗೂ ವಿಕ್ಟೋರಿಯಾ ಅವರು ನಿರಂತರವಾಗಿ ಹುಡುಕಾಟ ನಡೆಸಿದರೂ ದಾನಿ ದೊರೆಯಲಿಲ್ಲ.
ನಂತರ ಕಾರವಾರದ ‘ಬ್ಲಡ್ ಡೋನರ್ಸ್ ಕಾರವಾರ’ ವಾಟ್ಸಪ್ ಗುಂಪಿನ ವಿನಾಯಕ ನಾಯ್ಕ (ಚೆಂಡಿಯಾ) ಅವರನ್ನು ಸಂಪರ್ಕಿಸಲಾಯಿತು. ಅವರು ತಕ್ಷಣ ಕಾರ್ಯಪ್ರವೃತ್ತರಾಗಿ, ಕಾರವಾರದ 112 ಪೊಲೀಸ್ ವಾಹನದ ಚಾಲಕರಾದ ಕುಮಟಾ ತಾಲ್ಲೂಕಿನ ಬಾಡಾ ಗ್ರಾಮದ ಅನಂತ ನಾರಾಯಣ ನಾಯ್ಕ ಅವರನ್ನು ಸಂಪರ್ಕಿಸಿದರು.
ಅನಂತ ನಾರಾಯಣ ನಾಯ್ಕ ಅವರು ಕೂಡಲೇ ಆಸ್ಪತ್ರೆಗೆ ತೆರಳಿ ಅತಿ ವಿರಳವಾದ O-ನೆಗೆಟಿವ್ ರಕ್ತದಾನ ಮಾಡಿದರು. ಇದರಿಂದ ಮಾರ್ಕೋಸ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಲು ಸಾಧ್ಯವಾಗಿದ್ದು, ಅವರ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ರಕ್ತದಾನ ಮಾಡಿದ ಅನಂತ ನಾರಾಯಣ ನಾಯ್ಕ ಹಾಗೂ ರಕ್ತದ ವ್ಯವಸ್ಥೆ ಕಲ್ಪಿಸಿದ ವಿನಾಯಕ ನಾಯ್ಕ (ಚೆಂಡಿಯಾ) ಅವರ ಮಾನವೀಯ ಸೇವೆಗೆ ಗಾಯಾಳುವಿನ ತಾಯಿ ಪ್ರಮಿಳಾ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸೇವಾಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
