ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಗಣೇಶ ಚತುರ್ಥಿಯ ಅಂಗವಾಗಿ ಕಾರವಾರದ ಬೈತಖೋಲ್ ಗ್ರಾಮದಲ್ಲಿ ಭಕ್ತಿಯ ಜೊತೆಗೆ ವಿಶೇಷತೆಯೂ ಗಮನ ಸೆಳೆದಿದೆ. ಇಲ್ಲಿನ ಯುವ ಮೀನುಗಾರರ ಸಂಘರ್ಷ ಸಮಿತಿಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ವಿನಾಯಕ ಹರಿಕಂತ್ರ ಅವರ ಮನೆಯಲ್ಲಿ 100 ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ಗಣಪತಿ ಮೂರ್ತಿಗೆ ಬರೋಬ್ಬರಿ 25 ಕೆಜಿ ತೂಕದ ಲಾಡು ನೈವೇದ್ಯವಾಗಿ ಅರ್ಪಿಸಲಾಗಿದೆ.
ಪಾರಂಪರಿಕವಾಗಿ ಕುಟುಂಬದಲ್ಲಿ ಪೂಜಿಸಿಕೊಂಡು ಬರುತ್ತಿರುವ ಈ ಗಣಪತಿಗೆ ಪ್ರತಿ ವರ್ಷವೂ ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸಲಾಗುತ್ತಿದ್ದು, ಈ ಬಾರಿ ಬೃಹತ್ ಗಾತ್ರದ ನೈವೇದ್ಯ ಸಿದ್ಧಪಡಿಸಿರುವುದು ವಿಶೇಷ ಗಮನ ಸೆಳೆದಿದೆ. ಕುಟುಂಬಸ್ಥರು ಹಾಗೂ ಭಕ್ತರು ಸೇರಿ ಭಕ್ತಿಭಾವದಿಂದ ಗಣೇಶನಿಗೆ ಪೂಜೆ ಸಲ್ಲಿಸಿ ಲಾಡು ನೈವೇದ್ಯ ಅರ್ಪಿಸಿದರು.
ಈ ವಿಶೇಷ ಮೋತಿ ಚುರುಣದ ಲಾಡನ್ನು ಕಾರವಾರದ ಕೆಎಸ್‌ಆರ್ ಸ್ವೀಟ್ಸ್ನಲ್ಲಿ ವಿಶೇಷವಾಗಿ ತಯಾರಿಸಲಾಗಿದ್ದು, ಸುಮಾರು 25 ಕೆಜಿ ತೂಕ ಹೊಂದಿದೆ. ಗಣೇಶನಿಗೆ ಅರ್ಪಿಸಿದ ಬಳಿಕ ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.
ಶತಮಾನಕ್ಕೂ ಮೀರಿದ ಗಣಪತಿಯ ಆರಾಧನೆಯೊಂದಿಗೆ ವಿಶಿಷ್ಟ ನೈವೇದ್ಯ ಅರ್ಪಿಸಿರುವುದು ಬೈತಖೋಲ್ ಭಾಗದ ಗಣೇಶೋತ್ಸವಕ್ಕೆ ಮತ್ತಷ್ಟು ಮೆರುಗು ತಂದಿದ್ದು, ಸ್ಥಳೀಯರ ಗಮನ ಸೆಳೆದಿದೆ. ಕುಟುಂಬದ ಹಿರಿಯರು ಬೆಳೆಸಿಕೊಂಡು ಬಂದಿರುವ ಈ ಧಾರ್ಮಿಕ ಪರಂಪರೆಯನ್ನು ಇಂದಿನ ಪೀಳಿಗೆಯೂ ಮುಂದುವರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.




