ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕಾರ್ಮಿಕರು ಉದ್ಯೋಗ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಪಡೆಯಬೇಕಾದ ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರದ ಶುಲ್ಕ ಹೆಚ್ಚಳದಿಂದ ಬಡ ಕಾರ್ಮಿಕರಿಗೆ ಆರ್ಥಿಕ ಹೊರೆ ಉಂಟಾಗುತ್ತಿದೆ. ಶುಲ್ಕವನ್ನು ಸಡಿಲಿಸುವಂತೆ ಕೈಗಾ ಕಾರ್ಮಿಕ ಸಂಘದ ಮುಖಂಡ ಅಮೃತ್ ಬಾಂದೇಕರ ಅವರು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರು.

Banner Ad

ತಾಲೂಕಿನ ಮಲ್ಲಾಪುರದಲ್ಲಿ ನಡೆದ ರಾಜ್ಯ ಸರ್ಕಾರದ ಪ್ರಜಾಸೇವೆ ಆಂದೋಲನ ಸಭೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರು ಪೊಲೀಸ್ ಅಧಿಕಾರಿಗಳಿಗೆ ಈ ಕುರಿತು ಮೌಖಿಕ ಮನವಿ ಮಾಡಿದರು.

ದಿನಗೂಲಿ, ಕಟ್ಟಡ ಕಾರ್ಮಿಕರು, ಭದ್ರತಾ ಸಿಬ್ಬಂದಿ, ಗೃಹ ಕೆಲಸಗಾರರು ಸೇರಿದಂತೆ ವಿವಿಧ ವರ್ಗದ ಕಾರ್ಮಿಕರಿಗೆ ಉದ್ಯೋಗದ ಸಂದರ್ಭದಲ್ಲಿ ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ ಅಗತ್ಯವಾಗುತ್ತಿದೆ. ಈ ಹಿಂದೆ ಕಡಿಮೆ ವೆಚ್ಚದಲ್ಲಿ ನಡೆಯುತ್ತಿದ್ದ ಪ್ರಕ್ರಿಯೆಗೆ ಇದೀಗ ಇಲಾಖೆಯ ವಿವಿಧ ಹಂತದ ಶುಲ್ಕಗಳ ಜತೆಗೆ ಕರ್ನಾಟಕ ಒನ್, ಸೇವಾ ಸಿಂಧು ಸೇರಿದಂತೆ ಆನ್‌ಲೈನ್ ಸೇವಾ ಕೇಂದ್ರಗಳ ಶುಲ್ಕವೂ ಸೇರುತ್ತಿದ್ದು, ಒಟ್ಟು ವೆಚ್ಚ ಸುಮಾರು ₹1,000ವರೆಗೆ ತಲುಪುತ್ತಿದೆ ಎಂದು ಅವರು ತಿಳಿಸಿದರು.

ದಿನಕ್ಕೆ ₹300ರಿಂದ ₹500ರವರೆಗೆ ದುಡಿಯುವ ಗೃಹ ಕೆಲಸಗಾರರು, ಕೈಗಾ ಕಾರ್ಮಿಕರು, ಸೆಕ್ಯುರಿಟಿ ಗಾರ್ಡ್‌ಗಳು ಹಾಗೂ ದಿನಗೂಲಿ ನೌಕರರು ಉದ್ಯೋಗದ ಭದ್ರತೆಗಾಗಿ ಇಷ್ಟೊಂದು ಮೊತ್ತ ಪಾವತಿಸುವುದು ಕಷ್ಟಕರವಾಗಿದೆ. ಹೀಗಾಗಿ ಬಡ ಕಾರ್ಮಿಕರ ಹಿತದೃಷ್ಟಿಯಿಂದ ಪೊಲೀಸ್ ಪ್ರಮಾಣ ಪತ್ರದ ಶುಲ್ಕದಲ್ಲಿ ಸಡಿಲಿಕೆ ಅಥವಾ ರಿಯಾಯಿತಿ ನೀಡುವಂತೆ ಅಮೃತ್ ಬಾಂದೇಕರ ಅವರು ಪೊಲೀಸ್ ಇಲಾಖೆಗೆ ಮನವಿ ಮಾಡಿದರು.

 

Please Share: