ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ಕಡವೆಯನ್ನು ಸ್ಥಳೀಯರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 53ರ ಸುಂಕಸಾಳ ಬಳಿ ನಡೆದಿದೆ.
ಹೆದ್ದಾರಿ ದಾಟುತ್ತಿದ್ದ ಕಡವೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಅದರ ಕುತ್ತಿಗೆ, ಕಾಲು ಹಾಗೂ ಬೆನ್ನಿನ ಭಾಗಕ್ಕೆ ಗಾಯಗಳಾಗಿವೆ. ಗಾಯಗೊಂಡ ಕಡವೆ ಹೆದ್ದಾರಿ ಬದಿಯಲ್ಲಿ ನರಳುತ್ತ ಬಿದ್ದಿರುವುದನ್ನು ಗಮನಿಸಿದ ಸುಂಕಸಾಳದ ಸಂದೀಪ ನಾಯ್ಕ, ಪ್ರವೀಣ ನಾಯ್ಕ ಹಾಗೂ ಸಂಭ್ರಮ ನಾಯ್ಕ ಅವರು ತಕ್ಷಣ ರಕ್ಷಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ರಾಮನಗುಳಿ ವಲಯ ಅರಣ್ಯಾಧಿಕಾರಿ ದೀಪಕ ನಾಯ್ಕ, ಫಾರೆಸ್ಟರ್ ಸಂತೋಷ, ಬೀಟ್ ಫಾರೆಸ್ಟರ್ ಪ್ರಭುದೇವ ಹಾಗೂ ವೀಕ್ಷಕರಾದ ಮಂಜು ಮತ್ತು ಹರೀಶ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಗಾಯಗೊಂಡ ಕಡವೆಯನ್ನು ಸುರಕ್ಷಿತವಾಗಿ ರಾಮನಗುಳಿ ವಲಯ ವಿಶ್ರಾಂತಿ ಗೃಹಕ್ಕೆ ಕರೆದೊಯ್ಯಲಾಯಿತು.

ಪಶು ಆಸ್ಪತ್ರೆಯ ವೈದ್ಯಾಧಿಕಾರಿ ರಾಮನಾಥ ಭಟ್ಟ ಅವರು ಗಾಯಗೊಂಡ ಕಡವೆಗೆ ಚಿಕಿತ್ಸೆ ನೀಡಿದ್ದು, ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಅದರ ಆರೈಕೆ ಮಾಡುತ್ತಿದ್ದಾರೆ. ಕಡವೆ ಸಂಪೂರ್ಣ ಚೇತರಿಸಿಕೊಂಡ ಬಳಿಕ ಮತ್ತೆ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಗಾಯಗೊಂಡ ಕಡವೆಗೆ ಸಮಯಕ್ಕೆ ನೆರವಾದ ಸ್ಥಳೀಯ ನಾಗರಿಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ವಲಯ ಅರಣ್ಯಾಧಿಕಾರಿ ದೀಪಕ ನಾಯ್ಕ ತಿಳಿಸಿದ್ದಾರೆ.


