ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಪೂಜೆಯ ನೆಪವೊಡ್ಡಿ ದೇವಾಲಯದ ಅರ್ಚಕರೊಬ್ಬರನ್ನು ಕರೆದೊಯ್ದು ಭೀಕರವಾಗಿ ಹತ್ಯೆ ಮಾಡಿ, ಶವವನ್ನು ತೋಟದಲ್ಲೇ ಹೂತಿಟ್ಟಿದ್ದ ಆರು ವರ್ಷಗಳ ಹಿಂದಿನ ಪ್ರಕರಣಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ, ಮೂವರು ಆರೋಪಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿದೆ.
ಕುಮಟಾ ತಾಲೂಕಿನ ಮುರೂರಿನ ಕುಂಭೇಶ್ವರ ದೇವಾಲಯದ ಅರ್ಚಕರಾಗಿದ್ದ ವಿಶ್ವೇಶ್ವರ ಭಟ್ ಹತ್ಯೆ ಪ್ರಕರಣದಲ್ಲಿ ಕುಜಳ್ಳಿ ಮೆಣಸಿನಕೆರೆಯ ಮಂಜುನಾಥ ಈಶ್ವರ ಹೆಗಡೆ, ಶಿರಸಿ ಸೋಮನಹಳ್ಳಿಯ ಹರೀಶ ಸುಬ್ರಾಯ ಹೆಗಡೆ ಹಾಗೂ ಸೊರಬ ಮೂಲದ ಧನಂಜಯ ಚಂದ್ರಶೇಖರ್ ನಾಯ್ಕ ಶಿಕ್ಷೆಗೆ ಗುರಿಯಾಗಿದ್ದಾರೆ.
2018ರ ಅಕ್ಟೋಬರ್ 16ರಂದು ಭೂಮಿಪೂಜೆ ಮಾಡಿಕೊಡುವ ನೆಪದಲ್ಲಿ ವಿಶ್ವೇಶ್ವರ ಭಟ್ ಅವರನ್ನು ಆರೋಪಿಗಳು ಕರೆದೊಯ್ದಿದ್ದರು. ಬಳಿಕ ಕುಜಳ್ಳಿಯ ಮಂಜುನಾಥ ಹೆಗಡೆಗೆ ಸೇರಿದ ತೋಟದಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದರು. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ತೋಟದಲ್ಲೇ ಗುಂಡಿ ತೆಗೆದು ಹೂತು, ಮೃತರ ಬೈಕ್‌ನ್ನು ಸಮೀಪದ ಬಾವಿಗೆ ಎಸೆದು ಪರಾರಿಯಾಗಿದ್ದರು.
ಪತಿ ಕಾಣೆಯಾಗಿರುವ ಕುರಿತು ಮೃತರ ಪತ್ನಿ ಸರಸ್ವತಿ ಭಟ್ ಕುಮಟಾ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಅಂದಿನ ಸಿಪಿಐ ಸಂತೋಷ್ ಶೆಟ್ಟಿ ಹಾಗೂ ಪಿಎಸ್ಐ ಸಂಪತ್ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿತ್ತು. ತನಿಖೆಯ ವೇಳೆ ತೋಟದಲ್ಲಿ ಹೂತಿಟ್ಟಿದ್ದ ಶವವನ್ನು ಹೊರತೆಗೆದು ಶವಪರೀಕ್ಷೆ ನಡೆಸಲಾಗಿತ್ತು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಅವರು, ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಎಪಿಪಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ 62 ಸಾಕ್ಷಿಗಳು, 177 ದಾಖಲೆಗಳು ಹಾಗೂ 15 ಮುದ್ದೆಮಾಲುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿ, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ವಿಧಿವಿಜ್ಞಾನ ವರದಿಗಳು ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳಾಗಿದ್ದವು.
ಆರು ವರ್ಷಗಳ ಕಾಲ ನಡೆದ ಕಾನೂನು ಹೋರಾಟಕ್ಕೆ ಅಂತ್ಯವಾಗಿದ್ದು, ಅರ್ಚಕ ವಿಶ್ವೇಶ್ವರ ಭಟ್ ಅವರ ಕುಟುಂಬಕ್ಕೆ ನ್ಯಾಯ ದೊರೆತಂತಾಗಿದೆ.


