ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66ರ ತಾಲೂಕಿನ ಅಂಬೇಡ್ಕರ್ ಸರ್ಕಲ್ ಬಳಿ ಬುಧವಾರ ತಡರಾತ್ರಿ ಅನಿಲ (ಗ್ಯಾಸ್) ತುಂಬಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಸ್ಥಳೀಯರ ಮಾಹಿತಿಯಿಂದ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದ ಭೀಕರ ಅವಘಡ ತಪ್ಪಿದಂತಾಗಿದೆ.

ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಅನಿಲ ತುಂಬಿಕೊಂಡು ತೆರಳುತ್ತಿದ್ದ ಟ್ಯಾಂಕರ್ ಅಂಕೋಲಾ ಮಾರ್ಗವಾಗಿ ಸಾಗುತ್ತಿತ್ತು. ಈ ವೇಳೆ ಭಾರಿ ಮಳೆ ಸುರಿಯುತ್ತಿದ್ದ ಪರಿಣಾಮ ರಸ್ತೆ ಸರಿಯಾಗಿ ಕಾಣದೆ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

ಟ್ಯಾಂಕರ್ ಪಲ್ಟಿಯಾದ ವಿಷಯ ತಿಳಿದ ಸ್ಥಳೀಯರು ಶಾಂತಾರಾಮ ಹುಲಸ್ವಾರ ಅವರ ನೆರವಿನಿಂದ ತಕ್ಷಣ ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ, ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತೆರವು ಕಾರ್ಯಾಚರಣೆ ಆರಂಭಿಸಿದರು.

ಟ್ಯಾಂಕರ್‌ನಿಂದ ಯಾವುದೇ ಅನಿಲ ಸೋರಿಕೆಯಾಗದ ಹಿನ್ನೆಲೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಸುತ್ತಮುತ್ತ ಜನವಸತಿ ಪ್ರದೇಶವಿರುವುದರಿಂದ ಘಟನೆಯಿಂದ ಸ್ಥಳೀಯರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು. ನಾಲ್ಕೈದು ಕ್ರೇನ್‌ಗಳ ನೆರವಿನಿಂದ ಟ್ಯಾಂಕರ್‌ನ್ನು ರಸ್ತೆಯಿಂದ ತೆರವುಗೊಳಿಸಲಾಗಿದ್ದು, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ತಡರಾತ್ರಿ 3.30ರವರೆಗೆ ಕಾರ್ಯಾಚರಣೆ ನಡೆಸಿದರು.

ಸ್ಥಳೀಯರು ಸಮಯಪ್ರಜ್ಞೆಯಿಂದ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿ ಕಾರ್ಯಾಚರಣೆಗೆ ಸಹಕರಿಸಿದ್ದಾರೆ. ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಂಕೋಲಾ ಪೊಲೀಸರು ಪರಿಶೀಲನೆ ನಡೆಸಿ, ಸಂಚಾರಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಆರ್‌ಬಿ ಕಾಮಗಾರಿಗೆ ಸ್ಥಳೀಯರ ಆರೋಪ: ಅಂಬೇಡ್ಕರ್ ಸರ್ಕಲ್ ಬಳಿ ಐಆರ್‌ಬಿ ಸಂಸ್ಥೆಯ ಅವೈಜ್ಞಾನಿಕ ಹಾಗೂ ಅಸಮರ್ಪಕ ಕಾಮಗಾರಿಯಿಂದ ವಾಹನ ಮತ್ತು ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾಮಗಾರಿ ಪೂರ್ಣಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದರಿಂದ ಈ ಭಾಗದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


