ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಎಲ್ಲೆಡೆ ಗಣೇಶನ ಆಗಮನದ ಸಂಭ್ರಮ ಮನೆ ಮಾಡಿದ್ದರೆ, ಕಡವಾಡದಲ್ಲಿ ಮಾತ್ರ ಮಣ್ಣಿನ ಮುದ್ದೆಗೆ ಗಣೇಶನ ರೂಪ ನೀಡುವ ಕೈಗಳಿಗೆ ಕೊನೆಯ ಕ್ಷಣದ ಬಿಡುವಿಲ್ಲ. ಮಣ್ಣಿಗೆ ಜೀವ ತುಂಬಿ, ಬಣ್ಣದ ಚಿತ್ತಾರದಿಂದ ವಿಗ್ರಹಗಳಿಗೆ ಕಳೆ ನೀಡುತ್ತಿರುವ ಗಣಪತಿ ಬಾಬನಿ ಮಾಂಜ್ರೇಕರ ಹಾಗೂ ಪುತ್ರ ರಜತ ಮಾಂಜ್ರೇಕರ ಅವರ ಕೈಚಳಕದ ಗಣಪತಿಗಳು ಕಾರವಾರದ ಗಡಿ ದಾಟಿ ಗೋವಾದ ಮನೆಗಳನ್ನೂ ತಲುಪುತ್ತಿವೆ.

Banner Ad

ಶ್ರೀ ಗಣೇಶ ಹಬ್ಬಕ್ಕೆ ಇನ್ನೇನು ಒಂದು ದಿನ ಬಾಕಿ ಉಳಿದಿದ್ದು, ಕಡವಾಡದಲ್ಲಿ ತಂದೆ-ಮಗ ಮಣ್ಣಿನ ಗಣಪತಿ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ವಿವಿಧ ವಿನ್ಯಾಸ ಹಾಗೂ ಕಲಾಕೃತಿಗಳಲ್ಲಿ ಈ ಬಾರಿ 30 ವಿಗ್ರಹಗಳನ್ನು ತಯಾರಿಸಿದ್ದು, ಹಬ್ಬದ ಮುನ್ನಾದಿನವೇ ಐದು ವಿಗ್ರಹಗಳು ಗೋವಾ ರಾಜ್ಯಕ್ಕೆ ತೆರಳಿವೆ.

ಗಣಪತಿ ಬಾಬನಿ ಮಾಂಜ್ರೇಕರ ಅವರು ಹಲವು ವರ್ಷಗಳಿಂದ ಮಣ್ಣಿನ ಗಣಪತಿ ವಿಗ್ರಹ ತಯಾರಿಸುವ ಕಾಯಕದಲ್ಲಿದ್ದಾರೆ. ತಮ್ಮ ಪುತ್ರ ರಜತ ಅವರಿಗೆ 9ನೇ ವಯಸ್ಸಿನಲ್ಲಿಯೇ ಈ ಕಲೆಯನ್ನು ಕಲಿಸಿದ್ದು, ಬಾಲ್ಯದಿಂದಲೇ ತಂದೆಯ ಜತೆ ಮಣ್ಣಿನ ವಿಗ್ರಹ ರೂಪಿಸುವುದನ್ನು ಕಲಿತ ರಜತ ಇದೀಗ ತಂದೆಯ ಜತೆಗೂಡಿ ಈ ಕಲೆಯನ್ನು ಮುಂದುವರಿಸುತ್ತಿದ್ದಾರೆ.

ಕಾರವಾರ ತಾಲ್ಲೂಕು ಮಾತ್ರವಲ್ಲದೆ ಗೋವಾದಲ್ಲಿಯೂ ಇವರ ವಿಗ್ರಹಗಳಿಗೆ ಉತ್ತಮ ಬೇಡಿಕೆ ಇದೆ. ಪ್ರತಿ ವರ್ಷ ಮಣ್ಣಿನ ಗಣಪತಿ ವಿಗ್ರಹಗಳ ತಯಾರಿಕೆ ಹೆಚ್ಚುತ್ತಿದ್ದರೂ, ಈ ಕಾಯಕದಲ್ಲಿ ತೊಡಗಿರುವ ಕಲಾವಿದರ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿರುವುದು ಆತಂಕ ಮೂಡಿಸಿದೆ.

ದುಬಾರಿ ಜೀವನದ ನಡುವೆ ಮಣ್ಣು, ಬಣ್ಣ ಹಾಗೂ ಇತರ ಸಾಮಗ್ರಿಗಳ ವೆಚ್ಚ ಹೆಚ್ಚಾಗಿದ್ದು, ಒಂದು ವಿಗ್ರಹವನ್ನು ರೂಪಿಸಿ ಗ್ರಾಹಕರ ಮನೆ ತಲುಪಿಸುವವರೆಗೆ ಕಲಾವಿದರು ಸಾಕಷ್ಟು ಹಣ ಮತ್ತು ಶ್ರಮ ವ್ಯಯಿಸಬೇಕಾಗಿದೆ. ಇದರಿಂದ ಪಾರಂಪರಿಕ ಕಲೆಯನ್ನೇ ನಂಬಿಕೊಂಡಿರುವ ಕಲಾವಿದರಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ.

ಮಣ್ಣಿನ ಗಣಪತಿ ತಯಾರಿಕೆಯಂತಹ ಪಾರಂಪರಿಕ ಕಲೆಗಳು ಕಣ್ಮರೆಯಾಗದಂತೆ ಸರ್ಕಾರ ಕಲಾವಿದರಿಗೆ ಹೆಚ್ಚಿನ ಆರ್ಥಿಕ ನೆರವು ಹಾಗೂ ಪ್ರೋತ್ಸಾಹ ನೀಡಬೇಕು. ಮಾಸಾಶನ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿ ಕಲಾವಿದರನ್ನು ಗೌರವಿಸುವ ಮೂಲಕ ಈ ಕಲೆಯನ್ನು ಮುಂದಿನ ಪೀಳಿಗೆಗೂ ಉಳಿಸಬೇಕು ಎಂಬುದು ಕಲಾವಿದರ ಒತ್ತಾಯವಾಗಿದೆ.

 

Please Share: