ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಅಜ್ಜಿಯನ್ನು ಬ್ಲೇಡ್‌ನಿಂದ ಬೆದರಿಸಿ ಕೊರಳಲ್ಲಿದ್ದ ಸುಮಾರು ₹1.20 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಹಳಿಯಾಳ ಪೊಲೀಸರು ಬಂಧಿಸಿದ್ದಾರೆ.

Banner Ad

ಸೆ.7ರಂದು ಬೆಳಿಗ್ಗೆ 11.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ಅಜ್ಜಿಯನ್ನು ಭಯಪಡಿಸಿ ಅವರ ಕೊರಳಲ್ಲಿದ್ದ 6 ಕೊಳವೆ, 4 ಗುಂಡು ಹಾಗೂ 2 ತಾಳಿಗಳನ್ನು ಬ್ಲೇಡ್‌ನಿಂದ ಕತ್ತರಿಸಿ ಆರೋಪಿತ ಮಂಜುನಾಥ ಜುಂಜವಾಡಕರ ಆಭರಣಗಳನ್ನು ಸುಲಿಗೆ ಮಾಡಿಕೊಂಡು ಹೋಗಿದ್ದಾನೆ ಎಂದು ದೂರು ದಾಖಲಾಗಿತ್ತು.

ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.237/2026ರ ಅಡಿಯಲ್ಲಿ ಬಿಎನ್‌ಎಸ್‌ನ ಕಲಂ 332(ಸಿ), 309(4), 351(2)ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ಪತ್ತೆಗಾಗಿ ವಿಶೇಷ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು, ಖಚಿತ ಮಾಹಿತಿ ಆಧರಿಸಿ ಸೆ.10ರಂದು ಧಾರವಾಡದ ತಪೋವನ ನಗರದಲ್ಲಿ ಮಂಜುನಾಥ ಶಿವಾಜಿ ಜುಂಜವಾಡಕರ (ಹಂಪಿಹೊಳೆ, ಹಳಿಯಾಳ ತಾಲೂಕು; ಸದ್ಯ ತಪೋವನ ನಗರ, ಧಾರವಾಡ) ಹಾಗೂ ಅರ್ಜುನ್ ಬಸಪ್ಪ ಹಡಪದ (ಹಳ್ಳಿಗೇರಿ, ಧಾರವಾಡ) ಅವರನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಸುಮಾರು ₹1.20 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ₹50 ಸಾವಿರ ಮೌಲ್ಯದ ಕೆಎ-65 ಇಎನ್-2055 ನೋಂದಣಿ ಸಂಖ್ಯೆಯ ಎಚ್‌ಎಫ್ ಡಿಲಕ್ಸ್ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.

ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ದಾಂಡೇಲಿ ಡಿವೈಎಸ್‌ಪಿ ಶಿವಾನಂದ ಮದರಕಂಡಿ ಅವರ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಭೀಮಣ್ಣ ಸೋರಿ ನೇತೃತ್ವದಲ್ಲಿ ಪಿಎಸ್‌ಐಗಳಾದ ಕುಮಾರ್ ಕಾಂಬಳೆ ಹಾಗೂ ಮಹೇಶ ಮಾಳಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣ ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

 

Please Share: