ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆ ಸಮೀಪದ ಜಂಬಳ್ಳಿ ಅರಣ್ಯದಲ್ಲಿ ಕಾರು ಬಿಟ್ಟು ನಾಪತ್ತೆಯಾಗಿದ್ದ ಕುಡುಮಲ್ಲಿಗೆ ಸಹಕಾರ ಸೊಸೈಟಿ ಸಿಇಒ ಮದನ್ ಅವರು ಭಟ್ಕಳದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಆದರೆ ಜಂಬಳ್ಳಿ ಅರಣ್ಯದಲ್ಲಿ ಕಾರು, ಮೊಬೈಲ್ ಹಾಗೂ ಸೊಸೈಟಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಟ್ಟು ಮದನ್ ಅವರು ಭಟ್ಕಳಕ್ಕೆ ಹೇಗೆ ತಲುಪಿದರು? ಎಂಬ ಪ್ರಶ್ನೆ ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲೂ ಕುತೂಹಲ ಮೂಡಿಸಿದೆ.
ಮದನ್ ಅವರ ಮಾರುತಿ ಸ್ವಿಫ್ಟ್ ಕಾರು ಜಂಬಳ್ಳಿ ಬಳಿಯ ನಿರ್ಜನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಕಾರಿನ ಕೀಲಿಕೈ ಸೇರಿದಂತೆ ಮೊಬೈಲ್ ಫೋನ್ ಹಾಗೂ ಸೊಸೈಟಿಗೆ ಸಂಬಂಧಿಸಿದ ಲೆಕ್ಕದ ಪುಸ್ತಕಗಳು ಕಾರಿನಲ್ಲೇ ಇದ್ದವು. ಇದರಿಂದ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿತ್ತು.
ಶುಕ್ರವಾರ ತೀರ್ಥಹಳ್ಳಿಯ ನಿವಾಸದಿಂದ ಹೊರಟಿದ್ದ ಮದನ್ ಬಳಿಕ ನಾಪತ್ತೆಯಾಗಿದ್ದರು. ಕಾರು ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ವ್ಯಾಪಕ ಶೋಧ ನಡೆಸಿದ್ದರು. ಇದೇ ವೇಳೆ ಮದನ್ ಅವರು ಭಟ್ಕಳದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದು, ಬಳಿಕ ಮನೆಗೆ ಮರಳಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕುಡುಮಲ್ಲಿಗೆ ಸೊಸೈಟಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದು, ಈ ಕುರಿತು ಮಾಳೂರು ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು ಎನ್ನಲಾಗಿದೆ. ಹೀಗಾಗಿ ಮದನ್ ಅವರ ನಾಪತ್ತೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಇದೀಗ ಮದನ್ ಸುರಕ್ಷಿತವಾಗಿ ಪತ್ತೆಯಾಗಿರುವುದರಿಂದ ಪ್ರಕರಣ ಸುಖಾಂತ್ಯ ಕಂಡಿದ್ದರೂ, ಅರಣ್ಯದಲ್ಲಿ ಕಾರನ್ನು ಬಿಟ್ಟು ಹೋಗಿದ್ದೇಕೆ? ಮೊಬೈಲ್ ಮತ್ತು ದಾಖಲೆಗಳನ್ನು ಕಾರಿನಲ್ಲೇ ಉಳಿಸಿದ್ದು ಏಕೆ? ಅಲ್ಲಿಂದ ಭಟ್ಕಳಕ್ಕೆ ಅವರು ಯಾವ ಮಾರ್ಗದಲ್ಲಿ ಹಾಗೂ ಯಾರ ನೆರವಿನಿಂದ ತೆರಳಿದರು? ಎಂಬ ಹಲವು ಪ್ರಶ್ನೆಗಳು ಉಳಿದಿವೆ.
ಈ ಎಲ್ಲ ಪ್ರಶ್ನೆಗಳಿಗೆ ಮದನ್ ಅವರ ಹೇಳಿಕೆ ಹಾಗೂ ಪೊಲೀಸ್ ತನಿಖೆಯಿಂದ ಸ್ಪಷ್ಟತೆ ಸಿಗಬೇಕಿದೆ. ವಿಶೇಷವಾಗಿ ಭಟ್ಕಳದಲ್ಲಿ ಅವರು ಪತ್ತೆಯಾದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಂಪರ್ಕದ ಬಗ್ಗೆಯೂ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


