ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕು ಪಂಚಾಯತ ಮಾಜಿ ಸದಸ್ಯರಾಗಿದ್ದ ಕಾರವಾರ ತಾಲೂಕಿನ ಕಿನ್ನರದ ಪ್ರಶಾಂತ ಗೋವೆಕರ್ ಅವರಿಗೆ ಇದೀಗ ಕಾರವಾರದಿಂದ ‘ಹೊಸಪೇಟೆ ಟೂರ್’ ಭಾಗ್ಯ. ಆದರೆ ಇದು ರಾಜಕೀಯ ಪ್ರವಾಸವೂ ಅಲ್ಲ, ಪ್ರವಾಸೋದ್ಯಮದ ಪ್ರವಾಸವೂ ಅಲ್ಲ. ಪೊಲೀಸ್ ಇಲಾಖೆಯ ಗಡಿಪಾರು ಆದೇಶದ ಮೇರೆಗೆ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ತೆರಳಬೇಕಾದ ಅನಿವಾರ್ಯತೆ!
ಕಾರವಾರ ತಾಲೂಕು ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿದ್ದ ಪ್ರಶಾಂತ ಗೋವೆಕರ್ ಅವರು ಒಂದು ಅವಧಿಯಲ್ಲಿ ತಾಲೂಕು ಪಂಚಾಯತ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ ಅವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುತ್ತಾ ಬಂದ ಹಿನ್ನೆಲೆಯಲ್ಲಿ ರೌಡಿಶೀಟ್ ತೆರೆಯಲಾಗಿತ್ತು.
ಕಾರವಾರ ಶಹರ, ಗ್ರಾಮೀಣ, ಮಹಿಳಾ ಹಾಗೂ ಚಿತ್ತಾಕುಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 12 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಪದೇಪದೇ ಪ್ರಕರಣಗಳಲ್ಲಿ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ನೆಮ್ಮದಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಯನ್ನು ಪರಿಗಣಿಸಿ ಜಿಲ್ಲಾ ಪೊಲೀಸ್ ಇಲಾಖೆ ಗಡಿಪಾರು ಕ್ರಮ ಕೈಗೊಂಡಿದೆ.
ಇದರ ಪರಿಣಾಮವಾಗಿ ಕಾರವಾರದಲ್ಲಿ ಉಳಿಯಲು ‘ನೋ ಎಂಟ್ರಿ’, ಹೊಸಪೇಟೆಗೆ ತೆರಳಲು ‘ಗ್ರೀನ್ ಸಿಗ್ನಲ್’ ಎಂಬಂತಾಗಿದೆ. ಜಿಲ್ಲೆಯಲ್ಲೇ ಇದ್ದರೆ ಮತ್ತೆ ಕಾನೂನು ಸುವ್ಯವಸ್ಥೆಗೆ ತೊಂದರೆ ಉಂಟಾಗಬಹುದು ಎಂಬ ಕಾರಣಕ್ಕೆ ಪೊಲೀಸರು ಜಿಲ್ಲೆಯ ಗಡಿಯನ್ನೇ ದಾಟಿಸಿದ್ದಾರೆ.
ಸಾಮಾನ್ಯವಾಗಿ ಹೊಸಪೇಟೆಗೆ ಹೋಗುವುದಾದರೆ ಪ್ರವಾಸದ ಯೋಜನೆ, ವಾಹನ, ವಸತಿ ಹಾಗೂ ಮರಳುವ ದಿನಾಂಕ ಎಲ್ಲವೂ ನಿಗದಿಯಾಗಿರುತ್ತದೆ. ಆದರೆ ಪ್ರಶಾಂತ ಗೋವೆಕರ್ ಅವರ ಈ ‘ಪ್ರವಾಸ’ದಲ್ಲಿ ನಿರ್ಧಾರ ಮಾಡಿದ್ದು ಅವರು ಅಲ್ಲ; ಪೊಲೀಸ್ ಇಲಾಖೆಯೇ! ಜೊತೆಯಲ್ಲಿದ್ದವರು ಸ್ನೇಹಿತರು ಅಥವಾ ಕುಟುಂಬಸ್ಥರೂ ಅಲ್ಲ; ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ನಿಹಾಲ್ ಖಾನ್.
ಪೊಲೀಸರು ಪ್ರಶಾಂತ ಗೋವೆಕರ್ ಅವರನ್ನು ಹೊಸಪೇಟೆವರೆಗೆ ಕರೆದೊಯ್ದು ಗಡಿಪಾರು ಮಾಡಿ ವಾಪಸಾಗಿದ್ದಾರೆ. ಹೀಗಾಗಿ ಕಾರವಾರದಿಂದ ಹೊಸಪೇಟೆವರೆಗಿನ ಈ ಪ್ರಯಾಣಕ್ಕೆ ಪ್ರವಾಸದ ಖುಷಿಗಿಂತ ಪೊಲೀಸ್ ಆದೇಶದ ‘ತೂಕ’ವೇ ಹೆಚ್ಚಾಗಿದೆ.
ಕಾರವಾರದ ಗಡಿ ದಾಟಿಸಿದ 12 ಪ್ರಕರಣಗಳ ಲೆಕ್ಕ
ಒಂದೇ ಪೊಲೀಸ್ ಠಾಣೆಯಲ್ಲ, ಕಾರವಾರ ಶಹರದಿಂದ ಗ್ರಾಮೀಣ ಭಾಗದವರೆಗೆ ಹಾಗೂ ಮಹಿಳಾ ಮತ್ತು ಚಿತ್ತಾಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಪ್ರಕರಣಗಳು ದಾಖಲಾಗಿರುವುದು ಪೊಲೀಸರ ಕ್ರಮಕ್ಕೆ ಪ್ರಮುಖ ಕಾರಣವಾಗಿದೆ. ಪ್ರಕರಣಗಳ ಪುನರಾವರ್ತನೆ ಹಿನ್ನೆಲೆಯಲ್ಲಿ ರೌಡಿಶೀಟರ್ ಮೇಲೆ ನಿಗಾ ಇಡಲಾಗಿದ್ದರೂ ಪರಿಸ್ಥಿತಿ ಮುಂದುವರಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಜಿಲ್ಲೆಯಿಂದಲೇ ಹೊರಗಿಡುವ ಕ್ರಮ ಕೈಗೊಳ್ಳಲಾಗಿದೆ.
ಹೀಗಾಗಿ ಮಾಜಿ ತಾಪಂ ಸದಸ್ಯ ಪ್ರಶಾಂತ ಗೋವೆಕರ್ ಅವರ ಪಾಲಿಗೆ ಸದ್ಯಕ್ಕೆ ‘ಕಾರವಾರಕ್ಕೆ ವಿದಾಯ, ಹೊಸಪೇಟೆಗೆ ಸ್ವಾಗತ’ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಯಾಗಿದ್ದಾಗ ಕಾರವಾರದಲ್ಲೇ ಇದ್ದವರು, ಇದೀಗ ಪೊಲೀಸ್ ಇಲಾಖೆಯ ಆದೇಶದಿಂದಾಗಿ ತಮ್ಮ ಜಿಲ್ಲೆಯ ಗಡಿಯಾಚೆ ಇರುವಂತಾಗಿದೆ.

ಗಡಿಪಾರುಗೊಂಡ ತಾಪಂ ಮಾಜಿ ಸದಸ್ಯ ಪ್ರಶಾಂತ ಗೋವೆಕರ್
