ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: “ಗೋವಿಂದಾ… ಗೋವಿಂದಾ… ಹರಿ ಬೋಲ್…!” — ಒಂದೆಡೆ ಮೊಳಗಿದ ಜೈಕಾರ, ಮತ್ತೊಂದೆಡೆ ಯುವಕರ ಉತ್ಸಾಹದ ಕೂಗು, ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಜನಸಾಗರ… ದಹಿಹಂಡಿ ಒಡೆಯುವ ಕ್ಷಣಕ್ಕಾಗಿ ಕುತೂಹಲದಿಂದ ಕಾದಿದ್ದ ಸಾವಿರಾರು ಕಣ್ಣುಗಳು. ಅಂತಿಮವಾಗಿ ಪಿರಮಿಡ್ ನಿರ್ಮಿಸಿ ದಹಿಹಂಡಿ ಒಡೆಯುತ್ತಿದ್ದಂತೆ ಮುಗಿಲು ಮುಟ್ಟಿದ ಸಂಭ್ರಮ. ಇದು ಕಾರವಾರದ ರಾಧಾಕೃಷ್ಣ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಶನಿವಾರ ಕಂಡುಬಂದ ದಹಿಹಂಡಿ ಸೀಸನ್–2ರ ಅದ್ಧೂರಿ ಚಿತ್ರಣ.
ಹಿಂದೂ ಉತ್ಸವ ಸಮಿತಿ ಕಾರವಾರ ನೇತೃತ್ವದಲ್ಲಿ ನಡೆದ ಉತ್ಸವಕ್ಕೆ 5 ಸಾವಿರಕ್ಕೂ ಅಧಿಕ ಜನರು ಸಾಕ್ಷಿಯಾದರು. ಕ್ರೇನ್ ಮೂಲಕ ಎತ್ತರದಲ್ಲಿ ಕಟ್ಟಲಾಗಿದ್ದ ದಹಿಹಂಡಿ ಒಡೆಯಲು ಆರು ತಂಡಗಳು ಕಣಕ್ಕಿಳಿದಿದ್ದು, ಯುವಕರ ಸಾಹಸ, ಸಂಘಟನಾ ಶಕ್ತಿ ಹಾಗೂ ತಂಡದ ಒಗ್ಗಟ್ಟು ಗಮನ ಸೆಳೆಯಿತು.
ರೋಚಕ ಹಣಾಹಣಿಯ ಬಳಿಕ ಶ್ರೀ ಭೂದೇವಿ ಬೈತಕೊಲ್ ತಂಡ ದಹಿಹಂಡಿ ಒಡೆದು ಪ್ರಥಮ ಸ್ಥಾನ ಪಡೆದುಕೊಂಡಿತು. ತಂಡಕ್ಕೆ ₹15,555 ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು. ಜೈ ಭೂದೇವಿ ಬೈತಕೊಲ್ ತಂಡ ರನ್ನರ್ಸ್ಅಪ್ ಸ್ಥಾನ ಪಡೆದು ₹11,111 ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.
ಸ್ಪರ್ಧೆಯಲ್ಲಿ ಛತ್ರಪತಿ ಶಿವಾಜಿ ಬಾಯ್ಸ್ ಕೊಡಿಭಾಗ, ಜೈ ಕೊಡಿಬೀರ ಬಾಯ್ಸ್, ಮಾಳಸನಾರಾಯಣಿ ಯುವಕ ಮಂಡಲ ಬಿಣಗಾ ಹಾಗೂ ವೀರಗೌಡ್ರು ಭೂದೇವಿ ಬೈತಕೊಲ್ ಸೇರಿದಂತೆ ಆರು ತಂಡಗಳು ಭಾಗವಹಿಸಿದ್ದವು.
ರಾಧಾ–ಕೃಷ್ಣರಾಗಿ ಕಂಗೊಳಿಸಿದ ಪುಟಾಣಿಗಳು
ದಹಿಹಂಡಿ ಸಂಭ್ರಮದ ನಡುವೆ ನಡೆದ 12 ವರ್ಷದೊಳಗಿನ ಮಕ್ಕಳ ರಾಧಾ–ಕೃಷ್ಣ ವೇಷಭೂಷಣ ಸ್ಪರ್ಧೆ ಕೂಡ ಗಮನ ಸೆಳೆಯಿತು. ಬರೋಬ್ಬರಿ 65 ಮಕ್ಕಳು ಭಾಗವಹಿಸಿ ವೇದಿಕೆಗೆ ಕಳೆ ತಂದರು.
ಕೃಷ್ಣ ವೇಷದಲ್ಲಿ ರಿತಿಷಾ ರಘು ನಾಯ್ಕ ಪ್ರಥಮ, ರುತ್ವಿ ರೋಹನ್ ಗಂಗಾವಳಿಕರ್ ದ್ವಿತೀಯ, ನಕ್ಷಾ ನಾರಾಯಣ ಕೋಳಮಕರ ತೃತೀಯ ಸ್ಥಾನ ಪಡೆದರು. ರಾಧಾ ವೇಷದಲ್ಲಿ ಸಾಚಿ ಪ್ರಶಾಂತ ಶಿರೋಡ್ಕರ್ ಪ್ರಥಮ, ಅನನ್ಯ ದ್ವಿತೀಯ ಹಾಗೂ ಅದ್ವೈತಾ ಶರ್ಮಾ ತೃತೀಯ ಸ್ಥಾನ ಗಳಿಸಿದರು.
ದುಶ್ಚಟಕ್ಕೆ ‘ನೋ’; ಒಗ್ಗಟ್ಟಿಗೆ ‘ಹೌದು’
ಯುವಕರು ದುಶ್ಚಟಗಳಿಗೆ ದಾಸರಾಗದೆ, ಕೆಟ್ಟ ಚಟಗಳಿಂದ ದೂರವಿದ್ದು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬೇಕು ಎಂಬ ಸಂದೇಶವನ್ನು ಉತ್ಸವ ಸಾರಿತು. ಯುವಕರಲ್ಲಿ ಒಗ್ಗಟ್ಟು, ಶಿಸ್ತು ಮತ್ತು ಸಂಘಟನಾ ಮನೋಭಾವ ಬೆಳೆಸುವುದೇ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಶಾಸಕ ಸತೀಶ್ ಸೈಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ, ಮಾಜಿ ಸಚಿವ ಆನಂದ ಅಸ್ನೋಟಿಕರ್, ಉದ್ಯಮಿ ಕುಮಾರ ನಾಯ್ಕ ಹಳಗ, ಸಮೀರ್ ನಾಯ್ಕ, ದೀಪಕ ಹನೇಹಳ್ಳಿ, ರವಿರಾಜ ಅಂಕೋಲೆಕರ, ಸಾಯಿನಾಥ ನಾಯ್ಕ ಹಾಗೂ ನಯನ ಲೀಲಾವರ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಮಿತ್ ಮಾಳ್ಸೇಕರ, ವಿವೇಕ ಹೊನ್ನಾವರಕರ, ಧೀರಜ ರಾಣೆ, ಸಾಯಿಕಿರಣ ತಳೆಕರ, ರಾಜೇಶ್ ನಾಯ್ಕ, ಪ್ರಶಾಂತ ವಾರ್ಕರ್, ಸಂದೀಪ್ ಬೇಳೂರಕರ ಸೇರಿದಂತೆ 60 ಸದಸ್ಯರ ತಂಡ ಉತ್ಸವದ ಯಶಸ್ಸಿಗೆ ಶ್ರಮಿಸಿತು.
ದಹಿಹಂಡಿ ಕೇವಲ ಉತ್ಸವವಾಗಿರದೆ, ಯುವಶಕ್ತಿಯ ಒಗ್ಗಟ್ಟು, ಉತ್ಸಾಹ ಮತ್ತು ಸಂಘಟನಾ ಸಾಮರ್ಥ್ಯದ ಪ್ರದರ್ಶನಕ್ಕೆ ಕಾರವಾರದಲ್ಲಿ ವೇದಿಕೆಯಾಯಿತು.
ಕಾರವಾರದ ದಹಿಹಂಡಿ ಧಮಾಕಾ ಹೇಗಿತ್ತು? ವಿಡಿಯೋ ನೋಡಿ! 👇


