ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಮಲ್ಲಾಪುರದಲ್ಲಿ ಹೋರಿಗಳ ಹಾವಳಿ ಮತ್ತೆ ಆತಂಕ ಸೃಷ್ಟಿಸಿದ್ದು, ಸ್ಕೂಟಿಯಲ್ಲಿ ತೆರಳುತ್ತಿದ್ದವರ ಮೇಲೆ ಹೋರಿಗಳ ಗುಂಪು ಏಕಾಏಕಿ ದಾಳಿ ನಡೆಸಿದ ಪರಿಣಾಮ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. 
ಮಲ್ಲಾಪುರ ಪಂಚಾಯಿತಿ ವ್ಯಾಪ್ತಿಯ ಕುಚೇಗಾರ ಗೋಪಾಲನಗರ ನಿವಾಸಿ ಡುಮಿಂಗ್ ಎಫ್. ರೋಡ್ರಿಸ್ (ಸುಮಾರು 60) ಗಾಯಗೊಂಡವರು. ಮೀನುಗಾರಿಕೆ ನಡೆಸಿ ಜೀವನ ಸಾಗಿಸುತ್ತಿರುವ ಅವರು, ನಿತ್ಯದಂತೆ ಭಾನುವಾರ ಬೆಳಗ್ಗೆ ಮೀನು ಹಿಡಿಯಲು ತೆರಳಿದ್ದರು. ಬಳಿಕ ಗೋವಾದಲ್ಲಿರುವ ಸಂಬಂಧಿಕರೊಬ್ಬರ ನಿಧನದ ಸುದ್ದಿ ತಿಳಿದು ಮೀನು ಮಾರಿ ಮಗನೊಂದಿಗೆ ಸ್ಕೂಟಿಯಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಮಲ್ಲಾಪುರದ ರಸ್ತೆಯಲ್ಲಿ ಏಕಾಏಕಿ ಹೋರಿಗಳ ಗುಂಪು ಸ್ಕೂಟಿಯ ಮೇಲೆ ಎಗರಿದೆ. ಇದರಿಂದ ಸ್ಕೂಟಿ ನಿಯಂತ್ರಣ ತಪ್ಪಿ ಡುಮಿಂಗ್ ರಸ್ತೆಗೆ ಬಿದ್ದಿದ್ದು, ಹೋರಿ ಅವರ ಮೇಲೆ ಹರಿಹಾಯ್ದಿದೆ ಎನ್ನಲಾಗಿದೆ. ಘಟನೆಯಲ್ಲಿ ಅವರ ತಲೆ, ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.
ತಕ್ಷಣ ಸ್ಥಳೀಯರು ಗಾಯಾಳುವನ್ನು ಮಲ್ಲಾಪುರದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಸದ್ಯ ಡುಮಿಂಗ್ ಅವರು ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಕೆಲವೇ ದಿನಗಳ ಹಿಂದೆ ಸೊಸೆಯೂ ಹೋರಿ ದಾಳಿಗೆ ಬಲಿ
ಮಲ್ಲಾಪುರದಲ್ಲಿ ಬಿಡಾಡಿ ಹೋರಿಗಳ ಹಾವಳಿ ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಡುಮಿಂಗ್ ಅವರ ಸೊಸೆ ರಾಜೇಶ್ವರಿ ಪೆಟ್ರಿಕ್ (29) ಅವರು ಹೋರಿ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಅದೇ ಕುಟುಂಬದ ಮತ್ತೊಬ್ಬರು ಹೋರಿ ದಾಳಿಗೆ ಒಳಗಾಗಿರುವುದು ಸ್ಥಳೀಯರಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಬಿಡಾಡಿ ದನಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಹೋರಿ ದಾಳಿಯಲ್ಲಿ ಮೃತಪಟ್ಟ ರಾಜೇಶ್ವರಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ, ಇದೀಗ ಗಾಯಗೊಂಡಿರುವ ಡುಮಿಂಗ್ ಅವರ ಚಿಕಿತ್ಸಾ ವೆಚ್ಚಕ್ಕೂ ನೆರವು ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬಿಡಾಡಿ ದನಗಳ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.


