ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ತಾಲೂಕಿನ ಖಾಲಿ ಇರುವ ತಹಶೀಲ್ದಾರ್ (ಗ್ರೇಡ್–1) ಹುದ್ದೆಗೆ ಕಂದಾಯ ಇಲಾಖೆಯಲ್ಲಿ ಸ್ಥಳನಿರೀಕ್ಷೆಯಲ್ಲಿದ್ದ ಹಿರಿಯ ಅಧಿಕಾರಿ ಹೆಚ್.ಎನ್. ರಾಮಚಂದ್ರ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ.
ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಸುಗಮವಾಗಿ ಹಾಗೂ ಯಶಸ್ವಿಯಾಗಿ ನಿರ್ವಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಶನಿವಾರ (ಸೆ.5) ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ರಾಮಚಂದ್ರ ಅವರನ್ನು ಅಂಕೋಲಾ ತಹಶೀಲ್ದಾರ್ ಹುದ್ದೆಗೆ ನಿಯುಕ್ತಿಗೊಳಿಸಲಾಗಿದೆ.
ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಳ್ಳುವವರೆಗೆ ಮಾತ್ರ ಅವರು ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕಾರ್ಯ ಮುಕ್ತಾಯಗೊಂಡ ಬಳಿಕ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆದು, ಮುಂದಿನ ಕಾಯಂ ನಿಯುಕ್ತಿಗಾಗಿ ಸರ್ಕಾರಕ್ಕೆ ಕಾರ್ಯವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ನೂತನ ತಹಶೀಲ್ದಾರ್ ಅವರು ಕೂಡಲೇ ಅಂಕೋಲಾದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಅಧಿಕಾರ ಸ್ವೀಕರಿಸಿದ ವರದಿಯ ಪ್ರತಿಯನ್ನು ಇಲಾಖೆಯ ಅಧಿಕೃತ ಇ-ಮೇಲ್‌ಗೆ ಕಳುಹಿಸುವಂತೆಯೂ ಸೂಚಿಸಲಾಗಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಕೆ. ನರಸಿಂಹಮೂರ್ತಿ ಅವರು ರಾಜ್ಯಪಾಲರ ಆಜ್ಞೆಯ ಮೇರೆಗೆ ಈ ತಾತ್ಕಾಲಿಕ ಸ್ಥಳನಿಯುಕ್ತಿ ಆದೇಶಕ್ಕೆ ಸಹಿ ಹಾಕಿದ್ದಾರೆ.


