ಕರಾವಳಿ ವಾಯ್ಸ್ ನ್ಯೂಸ್ 

ಬೆಂಗಳೂರು: ಕರ್ನಾಟಕ ಪೊಲೀಸ್‌ ಕಾಯ್ದೆಯಡಿ ಗಡಿಪಾರು ಆದೇಶ ಹೊರಡಿಸುವ ಅಧಿಕಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ)ಗಳಿಗೆ ಇಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಅಲ್ಲದೆ, ಎಸ್‌ಪಿಗಳಿಗೆ ಗಡಿಪಾರು ಆದೇಶದ ಅಧಿಕಾರ ನೀಡಿದ್ದ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ರದ್ದುಪಡಿಸಿದೆ.

Banner Ad

ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೊರಡಿಸಿದ್ದ ಗಡಿಪಾರು ಆದೇಶ ಪ್ರಶ್ನಿಸಿ ನಿಪ್ಪಾಣಿ ತಾಲೂಕಿನ ನಿವಾಸಿ ಚಂದ್ರಕಾಂತ್‌ ಶಂಕರ್‌ ವಡ್ಡರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಕರ್ನಾಟಕ ಪೊಲೀಸ್‌ ಕಾಯ್ದೆಯ ಸೆಕ್ಷನ್‌ 55 ಮತ್ತು 56ರಡಿ ಅಪರಾಧ ಎಸಗುವ ಸಾಧ್ಯತೆ ಇರುವವರು ಹಾಗೂ ನಿರ್ದಿಷ್ಟ ಅಪರಾಧಗಳಲ್ಲಿ ಶಿಕ್ಷೆಗೊಳಗಾದವರನ್ನು ಗಡಿಪಾರು ಮಾಡಲು ಅವಕಾಶವಿದೆ. ಆದರೆ, ಬೆಂಗಳೂರು ಸೇರಿದಂತೆ ಕಮಿಷನರೇಟ್‌ ಪ್ರದೇಶಗಳಲ್ಲಿ ಪೊಲೀಸ್‌ ಕಮಿಷನರ್‌ಗಳು ಹಾಗೂ ಇತರ ಪ್ರದೇಶಗಳಲ್ಲಿ ಸರ್ಕಾರ ಅಧಿಸೂಚನೆ ಮೂಲಕ ಅಧಿಕಾರ ನೀಡಿದ ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿಗಳು ಮಾತ್ರ ಈ ಅಧಿಕಾರ ಹೊಂದಿರುತ್ತಾರೆ ಎಂದು ಹೈಕೋರ್ಟ್‌ ಹೇಳಿದೆ.

ಶಾಸನಸಭೆ ರೂಪಿಸಿರುವ ಕಾಯ್ದೆಯಲ್ಲಿ ನಿರ್ದಿಷ್ಟಪಡಿಸದ ಅಧಿಕಾರವನ್ನು ಕೇವಲ ಸರ್ಕಾರದ ಅಧಿಸೂಚನೆ ಮೂಲಕ ಮತ್ತೊಬ್ಬ ಅಧಿಕಾರಿಗೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಎಸ್‌ಪಿಗೆ ಗಡಿಪಾರು ಆದೇಶ ಹೊರಡಿಸುವ ಅಧಿಕಾರ ನೀಡಿದ್ದ ಅಧಿಸೂಚನೆ ಕಾನೂನುಬದ್ಧವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಸರ್ಕಾರದ ಸುತ್ತೋಲೆ ಅಥವಾ ಅಧಿಸೂಚನೆಯು ಮೂಲ ಕಾಯ್ದೆಯಲ್ಲಿರುವ ನಿಯಮಗಳಿಗೆ ವಿರುದ್ಧವಾಗಿ ಅಧಿಕಾರ ವಿಸ್ತರಿಸಲು ಸಾಧ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್‌ನ ಸಂಗೀತಾ ಸೂರ್ಯವಂಶಿ ಪ್ರಕರಣದ ತೀರ್ಪನ್ನೂ ನ್ಯಾಯಪೀಠ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ, ಚಂದ್ರಕಾಂತ್‌ ಶಂಕರ್‌ ವಡ್ಡರ್‌ ಅವರನ್ನು ಬೆಳಗಾವಿ ಎಸ್‌ಪಿ ಅವರು 2026ರ ಏಪ್ರಿಲ್‌ 28ರಂದು ಕರ್ನಾಟಕ ಪೊಲೀಸ್‌ ಕಾಯ್ದೆಯ ಸೆಕ್ಷನ್‌ 55ರಡಿ ಗಡಿಪಾರು ಮಾಡಿ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ವೇಳೆ, 2025ರ ನವೆಂಬರ್‌ನಲ್ಲಿ ಹೊರಡಿಸಿದ್ದ ಅಧಿಸೂಚನೆ ಮೂಲಕ ಎಸ್‌ಪಿಗಳಿಗೆ ಗಡಿಪಾರು ಅಧಿಕಾರ ನೀಡಲಾಗಿದೆ ಎಂದು ಸರ್ಕಾರದ ಪರ ವಕೀಲರು ವಾದಿಸಿದ್ದರು.

ಕಾಯ್ದೆಯಡಿ ಅಧಿಕಾರ ಹೊಂದಿರುವ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಅಥವಾ ಸಂಬಂಧಿತ ಪೊಲೀಸ್‌ ಕಮಿಷನರ್‌ ಅವರಿಂದ ಮಾತ್ರ ನಿಯಮಾನುಸಾರ ಗಡಿಪಾರು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

 

 

Please Share: