ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ತಾಲೂಕಿನ ಮಲ್ಲಾಪುರದ ಹಿಂದುವಾಡದಲ್ಲಿರುವ ಬಸ್ ತಂಗುದಾಣ ಶಿಥಿಲಾವಸ್ಥೆಗೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಕಾಂಕ್ರೀಟ್ ತುಂಡುಗಳು ಕಿತ್ತು ಬೀಳುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಕೃಷ್ಣಾ ಜಿ ನಾಯ್ಕ ಆಗ್ರಹಿಸಿದ್ದಾರೆ.

Banner Ad

ಕಾರವಾರ, ಕೈಗಾ ಸೇರಿದಂತೆ ವಿವಿಧ ಭಾಗಗಳಿಗೆ ಸಂಚರಿಸುವ ನೂರಾರು ಪ್ರಯಾಣಿಕರು ಪ್ರತಿನಿತ್ಯ ಈ ತಂಗುದಾಣವನ್ನೇ ಅವಲಂಬಿಸುತ್ತಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ತಂಗುದಾಣದ ಮೇಲ್ಛಾವಣಿಯ ಒಳಭಾಗದಿಂದ ಕಾಂಕ್ರೀಟ್ ಪದರಗಳು ಕಿತ್ತು ಬೀಳುತ್ತಿರುವುದರಿಂದ ಸಾರ್ವಜನಿಕರು ಜೀವಭಯದಲ್ಲೇ ಬಸ್‌ಗಾಗಿ ಕಾಯುವಂತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೃಷ್ಣಾ ಜಿ ನಾಯ್ಕ, ಪ್ರಯಾಣಿಕರ ಸುರಕ್ಷತೆಯೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು. ಅಪಾಯ ಸಂಭವಿಸುವ ಮುನ್ನವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶಿಥಿಲ ತಂಗುದಾಣವನ್ನು ದುರಸ್ತಿ ಮಾಡಬೇಕು. ದುರಸ್ತಿ ಸಾಧ್ಯವಾಗದಿದ್ದರೆ ಕೂಡಲೇ ಹೊಸ ಬಸ್ ತಂಗುದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸ್ಥಳೀಯ ನಿವಾಸಿಗಳು ಕೂಡ ಕೃಷ್ಣಾ ಜಿ ನಾಯ್ಕ ಅವರ ಆಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಬಸ್ ತಂಗುದಾಣದ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

 

Please Share: