ಕರಾವಳಿ ವಾಯ್ಸ್ ನ್ಯೂಸ್ 

ದಾಂಡೇಲಿ: ನಗರದ ಜಿ.ಎನ್. ರಸ್ತೆಯಲ್ಲಿರುವ ಹನುಮಾನ್ ಬಾರ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಜಾತಿ ನಿಂದನೆ ಮಾಡಿ, ಕೊಲೆ ಉದ್ದೇಶದಿಂದ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ದಾಂಡೇಲಿ ನಗರ ಪೊಲೀಸರು ಬಂಧಿಸಿದ್ದಾರೆ.

Banner Ad

ಜುಲೈ 27ರಂದು ನಡೆದ ಘಟನೆ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳು ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಖಚಿತ ಮಾಹಿತಿ ಮೇರೆಗೆ ಜುಲೈ 28ರಂದು ಆರೋಪಿಗಳಾದ ಅಶೋಕ ದೇಮಣ್ಣ ಗುರವ, ಪೈರೋಜ್ ಅಬ್ದುಲ್ ಸತ್ತಾರ್ ದವಲತ್ತಿ ಹಾಗೂ ಆಸೀಪ್ ಅಲಿಯಾಸ್ ಅಕ್ಷರ್ ಫಕ್ರುದ್ದೀನ್ ನರಗುಂದ ಅವರನ್ನು ಬಂಧಿಸಲಾಯಿತು. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕೋಯಿತಾ, ಕಬ್ಬಿಣದ ರಾಡ್ ಹಾಗೂ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಸಿಪಿಐ, ಪಿಎಸ್‌ಐ, ಎಎಸ್‌ಐ ಹಾಗೂ ದಾಂಡೇಲಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

 

 

 

Please Share: