ಕರಾವಳಿ ವಾಯ್ಸ್ ನ್ಯೂಸ್ 

ಹೊನ್ನಾವರ: ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಮಾವಿನಕುರ್ವಾ ಸಾಲೆಹಿತ್ಲು ನಿವಾಸಿ ಗಣಪಿ ಮಂಜು ನಾಯ್ಕ (80) ಎಂದು ಗುರುತಿಸಲಾಗಿದೆ.

ಮಾವಿನಕುರ್ವಾ ಸಾಲೆಹಿತ್ಲು ನಿವಾಸಿ ಕೃಷ್ಣ ಮಂಜು ನಾಯ್ಕ (52) ಅವರು ನೀಡಿದ ದೂರಿನ ಪ್ರಕಾರ, ಮಂಗಳವಾರ ಬೆಳಿಗ್ಗೆ 11.45 ಗಂಟೆ ಸುಮಾರಿಗೆ ಮಾವಿನಕುರ್ವಾ–ಹೊನ್ನಾವರ ರಸ್ತೆಯ ಸಾಲೆಹಿತ್ಲು ಗ್ರಾಮ ಒನ್ ಕೇಂದ್ರದ ಎದುರು ಈ ಅಪಘಾತ ಸಂಭವಿಸಿದೆ.

ಪ್ರಭಾತನಗರದ ಉವೈಜ್ ಜಾಬೀರ ಬೋಂಗ್ಯಾ ಅವರು ಸ್ಕೂಟರ್ (ಎಂ-47/ಇA-8948) ನಲ್ಲಿ ರೆಯಾನ್ ರಫೀಕ್ ಮುಕ್ತೇಸರ ಎಂಬಾತನನ್ನು ಹಿಂಬದಿ ಸವಾರನಾಗಿ ಕೂರಿಸಿಕೊಂಡು ವಲ್ಕಿ ಕಡೆಯಿಂದ ಹೊನ್ನಾವರದ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ರಸ್ತೆ ಎಡಬದಿಯಿಂದ ಬಲಕ್ಕೆ ಗ್ರಾಮ-1 ಕೇಂದ್ರದ ಕಡೆಗೆ ಹೋಗಲು ರಸ್ತೆ ದಾಟುತ್ತಿದ್ದ ಗಣಪಿ ಮಂಜು ನಾಯ್ಕ ಅವರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಪಘಾತದ ಪರಿಣಾಮ ಗಣಪಿ ಅವರಿಗೆ ತಲೆ, ಕೈ, ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ಕೂಟರ್ ಸವಾರ ಉವೈಜ್ ಹಾಗೂ ಹಿಂಬದಿ ಸವಾರ ರೆಯಾನ್ ರಫೀಕ್ ಮುಕ್ತೇಸರ ಅವರಿಗೂ ಗಾಯಗಳಾಗಿವೆ.

ಗಾಯಾಳು ಗಣಪಿ ಅವರನ್ನು ಹೊನ್ನಾವರ ತಾಲೂಕು ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವ ವೇಳೆ ಶರಾವತಿ ಸೇತುವೆ ಹತ್ತಿರ ಉಸಿರಾಟ ನಿಂತಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರನ್ನು ಪುನಃ ಹೊನ್ನಾವರ ತಾಲೂಕು ಆಸ್ಪತ್ರೆಗೆ ಕರೆತಂದಾಗ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಈ ಅಪಘಾತಕ್ಕೆ ಸ್ಕೂಟರ್ ಸವಾರನ ಅತಿವೇಗ ಹಾಗೂ ಅಜಾಗರೂಕ ಚಾಲನೆ ಕಾರಣವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 

Please Share: