ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಮಂಗಳವಾರ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಅಪರಿಚಿತ ಪ್ರವಾಸಿಗನ ಶವ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.

Banner Ad

ಮಂಗಳವಾರ ಸಂಜೆ ವಾರ್‌ಶಿಪ್ ಮ್ಯೂಸಿಯಂ ಹಿಂಭಾಗದ ಕಡಲ ತೀರದಲ್ಲಿ ತನ್ನ ಬ್ಯಾಗ್‌ನ್ನು ತೀರದಲ್ಲಿಟ್ಟು ಸಮುದ್ರಕ್ಕೆ ಇಳಿದಿದ್ದ ವ್ಯಕ್ತಿ, ಕೆಲವೇ ಕ್ಷಣಗಳಲ್ಲಿ ಅಲೆಗಳ ನಡುವೆ ಕಣ್ಮರೆಯಾಗಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಲೈಫ್‌ಗಾರ್ಡ್ ಸಿಬ್ಬಂದಿ, ಕರಾವಳಿ ಕಾವಲು ಪಡೆ ಹಾಗೂ ಕಾರವಾರ ನಗರ ಠಾಣೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು. ಆದರೆ ಪ್ರಕ್ಷುಬ್ಧ ಸಮುದ್ರದ ಕಾರಣ ಮಂಗಳವಾರ ವ್ಯಕ್ತಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.

ಬುಧವಾರ ಬೆಳಿಗ್ಗೆ ದಿವೇಕರ್ ಕಾಲೇಜು ಹಿಂಭಾಗದ ಸಮುದ್ರ ತೀರದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತದೇಹವನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಹೊರತೆಗೆದಿದ್ದಾರೆ.

ಘಟನಾ ಸ್ಥಳದಲ್ಲಿ ದೊರೆತ ಬ್ಯಾಗ್‌ನಲ್ಲಿ ಬೆಡ್‌ಶೀಟ್, ಬಟ್ಟೆಗಳು ಹಾಗೂ ಟೋಪಿ ಪತ್ತೆಯಾಗಿದ್ದು, ಅದರ ಆಧಾರದ ಮೇಲೆ ಮೃತನ ಗುರುತು ಪತ್ತೆಹಚ್ಚುವ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ.

ಈ ಕುರಿತು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

 

 

Please Share: