ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ಸುಮಾರು ಹತ್ತು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮನೆಕಳ್ಳತನ ಪ್ರಕರಣದ ಆರೋಪಿಯನ್ನು ಶಿರಸಿ ನಗರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತನನ್ನು ದಾಂಡೇಲಿ ನಗರದ ಪೇಪರ್ ಮಿಲ್ ಕ್ವಾರ್ಟರ್ಸ್ ಸಮೀಪದ ನಿವಾಸಿ ಸುಲ್ತಾನ್ (ಬುಡ್ಯಾ) ಹುಸೇನ್ ಸಾಬ್ ನದಾಫ್ (38) ಎಂದು ಗುರುತಿಸಲಾಗಿದೆ.

ಆರೋಪಿಯು ಪ್ರಕರಣದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನ ವಿರುದ್ಧ ವಾರಂಟ್ ಜಾರಿಗೊಳಿಸಿತ್ತು. ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿದ ಶಿರಸಿ ನಗರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಆರೋಪಿತನ ವಿರುದ್ಧ 2016-17ನೇ ಸಾಲಿನಲ್ಲಿ ಶಿರಸಿ ನಗರ, ಶಿರಸಿ ಮಾರುಕಟ್ಟೆ ಹಾಗೂ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ಮನೆಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಡಿ.ಎಸ್.ಪಿ. ಗೀತಾ ಪಾಟೀಲ ಹಾಗೂ ಸಿಪಿಐ ಸಂಪತ್ ಇ.ಸಿ. ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ನರಸಿಂಹಲು ಟಿ., ತನಿಖಾ ಪಿಎಸ್‌ಐ ನಾರಾಯಣ ರಾಥೋಡ್ ನೇತೃತ್ವದಲ್ಲಿ ಎಎಸ್‌ಐ ನೆಲ್ಸನ್ ಮೆಂಥರೋ ಹಾಗೂ ಸಿಬ್ಬಂದಿಗಳಾದ ರಾಮಯ್ಯ ಪೂಜಾರಿ, ಸದ್ದಾಂ ಹುಸೇನ್, ಈರಣ್ಣ, ಹನುಮಂತ ಮಾಕಾಪುರ ಮತ್ತು ಚನ್ನಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

Please Share: