ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ಗಾಂಜಾ ಸಾಗಾಟ ಪ್ರಕರಣದಲ್ಲಿ ಕಳೆದ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಾಗೂ ಶಿರಸಿಯ ನಗರ ಮತ್ತು ಮಾರುಕಟ್ಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯ ಹಲವು ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಶಿರಸಿ ಮಾರುಕಟ್ಟೆ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ.

Banner Ad

ಬಂಧಿತನನ್ನು ಗೋವಾದ ಕೊಲ್ವಾ ನಿವಾಸಿ ಡೇವಿಡ್ ಜೂಜೆ ಫರ್ನಾಂಡೀಸ್ (28) ಎಂದು ಗುರುತಿಸಲಾಗಿದೆ. ಆತ ಶಿರಸಿ ನಗರ ಠಾಣೆ ಹಾಗೂ ಮಾರುಕಟ್ಟೆ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳಲ್ಲೂ ಆರೋಪಿಯಾಗಿದ್ದ. ಅಲ್ಲದೆ, ಗಾಂಜಾ ಸಾಗಾಟ ಪ್ರಕರಣದಲ್ಲಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದನು.

ಗುರುವಾರ ಗೋವಾದ ಕೊಲ್ವಾ ಬೀಚ್ ಸಮೀಪ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಕಾರವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಶಿರಸಿ ಸಿಪಿಐ ಸಂಪತ್ ಅವರ ಮಾರ್ಗದರ್ಶನದಲ್ಲಿ, ಮಾರುಕಟ್ಟೆ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ ಕನಶೆಟ್ಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ವಿಶ್ವನಾಥ ಭಂಡಾರಿ, ಖಾದರಗಾಡಿ ಹಾಗೂ ಅಶೋಕ ಹರಿಕಂತ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Please Share: