ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಅಮದಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ಮೊಟ್ಟೆ ಮಾರಾಟಕ್ಕಿಂತ ಚಾಲಕನ ಮತ್ತಿನ ಆಟವೇ ದೊಡ್ಡ ಸುದ್ದಿಯಾಗಿದೆ. ಅಂಗಡಿಗೆ ಮೊಟ್ಟೆ ತಲುಪಿಸಬೇಕಿದ್ದ ಚಾಲಕ, ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ರಸ್ತೆ ಬದಿಯ ಬೈಕ್ಗಳಿಗೆ ಗುದ್ದಿದ್ದಲ್ಲದೆ, ಬಳಿಕ ಜನರತ್ತಲೇ ವಾಹನ ಚಲಾಯಿಸಲು ಮುಂದಾದ ಪರಿಣಾಮ ಸಾರ್ವಜನಿಕರು ಜೀವ ಉಳಿಸಿಕೊಳ್ಳಲು ಓಡಿದ ಪ್ರಸಂಗ ನಡೆದಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರಿನಿಂದ ಮೊಟ್ಟೆ ತುಂಬಿಕೊಂಡು ಬಂದಿದ್ದ ಕೆಎ-30 ಎ-5880 ನೋಂದಣಿ ಸಂಖ್ಯೆಯ ಟಾಟಾ 407 ವಾಹನ ಅಂಕೋಲಾದಲ್ಲಿ ಮೊಟ್ಟೆ ಖಾಲಿ ಮಾಡಿ ಕಾರವಾರಕ್ಕೆ ಬಂದಿತ್ತು. ಅಮದಳ್ಳಿ ಅಂಗಡಿಗೆ ಮೊಟ್ಟೆ ಹಾಕಲು ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ರೀತಿಯಲ್ಲಿ ವಾಹನ ಚಲಾಯಿಸಿದ್ದಾನೆ ಎನ್ನಲಾಗಿದೆ.
ಮೊದಲು ಹಿಮ್ಮುಖವಾಗಿ ವಾಹನ ಚಲಾಯಿಸಿ ನಿಂತಿದ್ದ ಬೈಕ್ಗಳಿಗೆ ಗುದ್ದಿದ ಚಾಲಕ, ಬಳಿಕ ವಾಹನವನ್ನು ಜನರತ್ತ ತಿರುಗಿಸಿದ ಎನ್ನಲಾಗಿದೆ. ಮೊಟ್ಟೆ ಒಡೆಯುವ ಮುನ್ನವೇ ಜನರ ತಲೆ ಒಡೆಯುವ ಪರಿಸ್ಥಿತಿ! ಎಂದು ಆತಂಕಗೊಂಡ ಸಾರ್ವಜನಿಕರು ಸ್ಥಳದಿಂದ ಓಡಿ ಬದಿಗೆ ಸರಿದರು.
ಚಾಲಕನ ಕುಡಿತದ ಸ್ಥಿತಿ ಕಂಡ ಸ್ಥಳೀಯರು ಆತನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯ ಮೀನುಗಾರ ಮಹಿಳೆಯೊಬ್ಬರು ಕೂಡ ಚಾಲಕನಿಗೆ ಕುಡಿತದ ಮತ್ತಿಗಿಂತ ಜೋರಾಗಿ ಬುದ್ಧಿ ಹೇಳಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಮೊಟ್ಟೆ ಸರಬರಾಜಿಗೆ ಬಂದ ವಾಹನ; ಆದರೆ ಚಾಲಕನ ‘ಮತ್ತಿನ ಸರಬರಾಜು’ ಮಾತ್ರ ಅಮದಳ್ಳಿ ಜನರಿಗೆ ಭಯವನ್ನೇ ಹಂಚಿತು! ಘಟನೆ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


