ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ಮ್ಯಾಕ್ಸ್ ಶಾಪಿಂಗ್ ಮಾಲ್ ಸಮೀಪದ (ಹಳೆಯ ಗೀತಾಂಜಲಿ ಟಾಕೀಸ್ ಬಳಿ) ಶನಿವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪರಸ್ಪರ ಹಲ್ಲೆ ಆರೋಪಿಸಿ ಎರಡೂ ಕಡೆಯಿಂದ ದೂರು–ಪ್ರತಿದೂರು ದಾಖಲಾಗಿದ್ದು, ಪ್ರಕರಣದ ಸತ್ಯಾಸತ್ಯತೆ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೀನು ವ್ಯಾಪಾರಿ ಸಿರಾಜ್ ಶಖೀಲ್ ಅಹಮ್ಮದ್ ಶೇಖ್ (29) ನೀಡಿದ ದೂರಿನಂತೆ, ರಾತ್ರಿ 8ರಿಂದ 8.15ರ ವೇಳೆಯಲ್ಲಿ ಸಹೋದರ ಕಮಾಲ್ ಶಖೀಲ್ ಅಹಮ್ಮದ್ ಶೇಖ್ ಅವರೊಂದಿಗೆ ಮ್ಯಾಕ್ಸ್ ಮಾಲ್ಗೆ ತೆರಳುತ್ತಿದ್ದಾಗ ರಶೀದ್ ಮೆಹಬೂಬ್ ಖಾನ್, ಸಂತೋಷ್ ವೆಂಕಟೇಶ್ ವಡ್ಡರ್ ಹಾಗೂ ಸಾಹಿಲ್ ಬ್ಯಾರಿ ಕಾರಿಗೆ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಸಂತೋಷ್ ವಡ್ಡರ್ ಕಲ್ಲಿನಿಂದ ಸಹೋದರನ ಹಣೆಗೆ ಹೊಡೆದಿದ್ದು, ಬಳಿಕ ಕಾರಿನಲ್ಲಿದ್ದ ಸ್ಟೀಲ್ ರಾಡ್ ತೆಗೆದುಕೊಂಡಾಗ ಸಾಹಿಲ್ ಬ್ಯಾರಿ ಅದನ್ನು ಕಸಿದುಕೊಂಡು ತನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ರಶೀದ್ ಮೆಹಬೂಬ್ ಖಾನ್ ನೀಡಿರುವ ದೂರಿನಲ್ಲಿ, ಸಂತೋಷ್ ವಡ್ಡರ್ ಹಾಗೂ ಸಾಹಿಲ್ ಅಬ್ಬಾಸ್ ಬ್ಯಾರಿ ಅವರೊಂದಿಗೆ ಕಾರಿನಲ್ಲಿ ಮ್ಯಾಕ್ಸ್ ಮಾಲ್ನಿಂದ ಸಿಟಿ ಮೊಬೈಲ್ ಅಂಗಡಿಗೆ ತೆರಳುತ್ತಿದ್ದಾಗ ಸಿರಾಜ್ ಶಖೀಲ್ ಅಹಮ್ಮದ್ ಶೇಖ್ ಹಾಗೂ ಅವರ ಸಹೋದರ ಕಾರಿಗೆ ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ತನ್ನ ಪತ್ನಿಯೊಂದಿಗೆ ಸಿರಾಜ್ ಅಸಭ್ಯವಾಗಿ ವರ್ತಿಸಿದ್ದ ವಿಚಾರದಲ್ಲಿ ಆತನನ್ನು ಬೈದಿದ್ದ ಹಳೆಯ ದ್ವೇಷದಿಂದ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಿರಾಜ್ ಸ್ಟೀಲ್ ರಾಡ್ನಿಂದ ತಮ್ಮನ ಎಡಗೈಗೆ ಹಾಗೂ ಸಾಹಿಲ್ ಬ್ಯಾರಿ ಅವರ ಎರಡೂ ಕಾಲಿನ ಮೊಣಕಾಲಿನ ಬಳಿ ಹೊಡೆದು ಗಾಯಗೊಳಿಸಿದ್ದಾರೆ ಎಂದು ರಶೀದ್ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ಸಿರಾಜ್ ಅವರ ಸಹೋದರ ಬೈಕ್ನಲ್ಲಿದ್ದ ಹೆಲ್ಮೆಟ್ ತೆಗೆದುಕೊಂಡು ಸಂತೋಷ್ ವಡ್ಡರ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.
ಎರಡೂ ಕಡೆಯ ದೂರುಗಳ ಆಧಾರದಲ್ಲಿ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾರು ಮೊದಲು ಹಲ್ಲೆ ನಡೆಸಿದರು ಹಾಗೂ ಗಲಾಟೆಗೆ ನಿಖರ ಕಾರಣವೇನು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಘಟನೆ ನಡೆದ ಸ್ಥಳದ ಸಿಸಿ ಟಿವಿ ದೃಶ್ಯಾವಳಿಗಳು ತನಿಖೆಯಲ್ಲಿ ಪ್ರಮುಖ ಸಾಕ್ಷ್ಯವಾಗುವ ಸಾಧ್ಯತೆ ಇದೆ.


