ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ: ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಣೆ ಮುಂದುವರಿದಿರುವ ನಡುವೆ ಅಬಕಾರಿ ವಿಭಾಗ ಹಮ್ಮಿಕೊಂಡಿದ್ದ ಗಸ್ತು ಕಾರ್ಯಾಚರಣೆಯಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು, ಅಂಕೋಲಾ ಹಟ್ಟಿಕೇರಿ ಟೋಲ್‌ಗೇಟ್ ಬಳಿ ಗೋವಾಕ್ಕೆ ಮಾತ್ರ ಮಾರಾಟಕ್ಕಿದ್ದ ಮದ್ಯವನ್ನು ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬುಧವಾರ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

Banner Ad

ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ, ಉಪ ಆಯುಕ್ತರು (ಉತ್ತರ ಕನ್ನಡ) ಕಾರವಾರ ಹಾಗೂ ಅಬಕಾರಿ ಉಪ ಅಧೀಕ್ಷಕರು (ಕಾರವಾರ ಉಪವಿಭಾಗ) ರವರ ಮಾರ್ಗದರ್ಶನದಲ್ಲಿ ಅಂಕೋಲಾ ವಲಯದ ತಂಡ ಬುಧವಾರ ಸಂಜೆ ಸುಮಾರು 6.30ರ ಸುಮಾರಿಗೆ ಗಸ್ತು ನಡೆಸುತ್ತಿದ್ದ ವೇಳೆ, ಶಂಕಾಸ್ಪದವಾಗಿ ಸಾಗುತ್ತಿದ್ದ ಸಿಲ್ವರ್ ಬಣ್ಣದ ಮಾರುತಿ ಸೆಲೆರಿಯೋ ಕಾರು (KA 13 P 0184) ಪರಿಶೀಲನೆಗೆ ಒಳಪಡಿಸಲಾಯಿತು.

ಆ ಸಮಯದಲ್ಲಿ ಕಾರಿನಲ್ಲಿದ್ದುದು ಗೋವಾ ರಾಜ್ಯಕ್ಕೆ ಮಾತ್ರ ಮಾರಾಟಕ್ಕಾಗಿ ಗುರುತಿಸಲ್ಪಟ್ಟ ವಿವಿಧ ಬ್ರ್ಯಾಂಡ್‌ನ ಮದ್ಯ ಬಾಟಲಿಗಳು. ಅಬಕಾರಿ ನಿರೀಕ್ಷಕರು ವಾಹನವನ್ನು ಜಪ್ತಿಪಡಿಸಿ ಒಟ್ಟು 24.550 ಮಿಲಿ ಮದ್ಯವನ್ನು ವಶಪಡಿಸಿಕೊಂಡಿದ್ದು, ಅದರ ಮೌಲ್ಯ ₹30,450 ಹಾಗೂ ವಾಹನದ ಮೌಲ್ಯ ₹5 ಲಕ್ಷ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಕರಣದಲ್ಲಿ ಹಾಸನ ಜಿಲ್ಲೆಯ ವೈ.ಬಿ. ನಟರಾಜ್ ಎಂಬ ಆರೋಪಿ ಬಂಧಿತನಾಗಿದ್ದು, ಬಿಎನ್ಎನ್ಎಸ್ ಪ್ರಕಾರ ನೋಟಿಸ್ ನೀಡಲಾಗಿದೆ. ಅಕ್ರಮ ಸಾಗಣೆಯ ಈ ಪ್ರಕರಣವನ್ನು ಅಂಕೋಲಾ ವಲಯದ ಅಬಕಾರಿ ನಿರೀಕ್ಷಕರು ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

 

 

Please Share: