ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ: ಮಗನನ್ನು ಕಳೆದುಕೊಂಡ ದುಃಖದಲ್ಲಿ ಬದುಕು ಸಾಗಿಸುತ್ತಿದ್ದ ಬಡ ಕುಟುಂಬಕ್ಕೆ ಸರ್ಕಾರದ ಅನ್ನಭಾಗ್ಯ ಅಕ್ಕಿಯನ್ನು ಮನೆ ಬಾಗಿಲಿಗೇ ತಲುಪಿಸುವ ಮೂಲಕ ಅಂಕೋಲಾ ತಹಶೀಲ್ದಾರ್ ನಿಶ್ಚಲ್ ನರೋನಾ ಮಾನವೀಯತೆ ಮೆರೆದಿದ್ದಾರೆ.

Banner Ad

ತುಮಕೂರಿನಲ್ಲಿ ನಾಡಾ ಬಾಂಬ್ ಸ್ಫೋಟಗೊಂಡು ಮೃತಪಟ್ಟಿದ್ದ ನಾಗೇಂದ್ರಗೌಡನ ಕುಟುಂಬ ಅಂಕೋಲಾ ತಾಲೂಕಿನ ಹೆಬ್ಬುಳ ಸಮೀಪದ ರಾಜನಗುಳಿ ಗ್ರಾಮದಲ್ಲಿದೆ. ಸರಿಯಾದ ರಸ್ತೆ ಸಂಪರ್ಕವೂ ಇಲ್ಲದ ಈ ಗ್ರಾಮದಲ್ಲಿ ನಾಗೇಂದ್ರಗೌಡನ ತಂದೆ ತಿಮ್ಮಪ್ಪ ಗೌಡ ಹಾಗೂ ಅವರ ಸಹೋದರ ಪ್ರತ್ಯೇಕ ಪಡಿತರ ಚೀಟಿಗಳನ್ನು ಹೊಂದಿದ್ದರೂ, ಜೂನ್ ತಿಂಗಳ ಅನ್ನಭಾಗ್ಯ ಅಕ್ಕಿಯನ್ನು ಪಡೆಯಲು ಸಾಧ್ಯವಾಗಿರಲಿಲ್ಲ.

ಜೂನ್ 27ರಂದು ತಿಮ್ಮಪ್ಪ ಗೌಡ ಪಡಿತರ ಅಂಗಡಿಗೆ ಅಕ್ಕಿ ಪಡೆಯಲು ಬಂದಿದ್ದ ವೇಳೆ, ಅಂಕೋಲಾ ಪೊಲೀಸರು ಅವರನ್ನು ಮನೆಗೆ ಕರೆದೊಯ್ದು ಮಗ ನಾಗೇಂದ್ರಗೌಡ ಮೃತಪಟ್ಟಿರುವ ದುಃಖದ ಸುದ್ದಿಯನ್ನು ತಿಳಿಸಿದ್ದರು.

ಹಾಲಕ್ಕಿ ಗೌಡ ಸಮುದಾಯದ ಸಂಪ್ರದಾಯದಂತೆ ಮನೆಯಲ್ಲಿ ಮರಣ ಸಂಭವಿಸಿದರೆ 12 ದಿನಗಳ ಕಾಲ ಕುಟುಂಬದವರು ಮನೆಯಿಂದ ಹೊರಗೆ ಹೋಗುವುದಿಲ್ಲ. ಈ ಕಾರಣದಿಂದ ಪಡಿತರ ಅಂಗಡಿಗೆ ತೆರಳಿ ಬಯೋಮೆಟ್ರಿಕ್ ನೀಡಿ ಅಕ್ಕಿ ಪಡೆಯುವುದು ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ. ಮನೆಯಲ್ಲೇ ಅಕ್ಕಿಯೂ ಇಲ್ಲದ ಪರಿಸ್ಥಿತಿಯಲ್ಲಿ ಕುಟುಂಬ ಸಂಕಷ್ಟ ಅನುಭವಿಸುತ್ತಿತ್ತು.

ಈ ವಿಷಯ ತಹಶೀಲ್ದಾರ್ ನಿಶ್ಚಲ್ ನರೋನಾ ಅವರ ಗಮನಕ್ಕೆ ಬಂದ ಕೂಡಲೇ, ಅವರು ಪಡಿತರ ಅಂಗಡಿಯವರನ್ನು ಸಂಪರ್ಕಿಸಿ ವಿಶೇಷ ವ್ಯವಸ್ಥೆ ಕಲ್ಪಿಸಿದರು. ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ವಿನಾಯಿತಿ ನೀಡಿ, ಸರ್ಕಾರದ ಅನ್ನಭಾಗ್ಯ ಅಕ್ಕಿಯನ್ನು ನೇರವಾಗಿ ನಾಗೇಂದ್ರಗೌಡನ ಮನೆಗೆ ತಲುಪಿಸುವಂತೆ ಸೂಚಿಸಿದರು.

ದುಃಖದ ಸಮಯದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಸ್ಪಂದಿಸಿ ಅಗತ್ಯ ನೆರವು ಒದಗಿಸಿರುವ ಈ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಮಯೋಚಿತವಾಗಿ ನೆರವು ತಲುಪಿಸಿದ ತಹಶೀಲ್ದಾರ್ ಅವರ ಈ ಕಾರ್ಯ ಮಾನವೀಯ ಆಡಳಿತಕ್ಕೆ ಉತ್ತಮ ಉದಾಹರಣೆಯಾಗಿದೆ.

 

 

Please Share: