ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಬಕ್ರೀದ್ ಹಬ್ಬದ ಸಂಭ್ರಮದ ಹಿನ್ನಲೆಯಲ್ಲಿ ಕಾರವಾರದ ಕಡಲತೀರ ಮಂಗಳವಾರ ಸಂಜೆ ಅಪರೂಪದ ತಳಿಯ ಟಗರುಗಳ ದರ್ಬಾರಿನಿಂದ ಕಂಗೊಳಿಸಿತು. ₹50 ಸಾವಿರದಿಂದ ₹4 ಲಕ್ಷ ಮೌಲ್ಯದ ಟಗರುಗಳು ಜನರ ಕಣ್ಣು ಕುಕ್ಕಿದರೆ, ಯುವಕರು ಟಗರುಗಳನ್ನು ಆಡಿಸುತ್ತಿದ್ದ ದೃಶ್ಯವನ್ನು ನೋಡಲು ಜನರು ನಿಬ್ಬೆರಗಾಗಿ ನಿಂತರು.
ಮುಂಬೈ, ಹಾವೇರಿ, ಕೊಲ್ಲಾಪುರ ಸೇರಿದಂತೆ ವಿವಿಧ ಭಾಗಗಳಿಂದ ತರಲಾಗಿದ್ದ ಕಾಶ್ಮೀರಿ, ವಿಲಾಯತಿ, ಬನ್ನೂರ್, ದಾರಫರ್, ರಾಮಪುರಿ, ಕರೋಲಿ ಕೋಟ ಹಾಗೂ ಶಿರೋಯಿ ತಳಿಯ ಸುಮಾರು 20ಕ್ಕೂ ಹೆಚ್ಚು ಟಗರುಗಳು ಪ್ರದರ್ಶನದಲ್ಲಿ ಗಮನ ಸೆಳೆದವು. ಸ್ಥಳೀಯವಾಗಿ ಸಾಕಿದ ಟಗರುಗಳೂ ಜನರ ಮೆಚ್ಚುಗೆ ಪಡೆದವು.
ಕುಟುಂಬ ಹಾಗೂ ಸ್ನೇಹಿತರೊಂದಿಗೆ ಬಕ್ರೀದ್ ಹಬ್ಬವನ್ನು ವಿಶೇಷವಾಗಿ ಆಚರಿಸಲು ಮುಸ್ಲಿಂ ಬಾಂಧವರು ಈ ಟಗರುಗಳನ್ನು ತಂದಿದ್ದರು. ಟಗರುಗಳ ಅಲಂಕಾರ, ಗಾತ್ರ ಹಾಗೂ ಆಟದ ವೈಖರಿ ನೋಡಿದ ಪ್ರವಾಸಿಗರು ಫೋಟೋ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಸಂಜೆ ವೇಳೆಗೆ ಕಡಲತೀರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಟಗರುಗಳ ಪ್ರದರ್ಶನ ಸಾರ್ವಜನಿಕರ ಆಕರ್ಷಣೆಯ ಕೇಂದ್ರಬಿಂದುವಾಯಿತು.
