ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಹಲಸು, ಮಾವು ಸೇರಿದಂತೆ ವಿವಿಧ ಹಣ್ಣುಗಳ ರುಚಿ ಮತ್ತು ವಿಶೇಷ ಖಾದ್ಯಗಳ ಸವಿಯನ್ನು ಒಂದೇ ಕಡೆ ಅನುಭವಿಸಲು ಕಾರವಾರದ ಜನರಿಗೆ ಅಪರೂಪದ ಅವಕಾಶ ಸಿಗುತ್ತಿದೆ. ರೋಟರಿ ಕ್ಲಬ್ ಕಾರವಾರ ಹಾಗೂ ಕುಂದಾಪುರದ ಬೆನಕ ಇವೆಂಟ್ಸ್ ಆಶ್ರಯದಲ್ಲಿ ನಗರದ ಕಾಜುಭಾಗದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಮೇ 29, 30 ಮತ್ತು 31ರಂದು ಮೂರು ದಿನಗಳ ಕಾಲ ಹಲಸು ಮತ್ತು ಹಣ್ಣು ಮೇಳ ಆಯೋಜಿಸಲಾಗಿದೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆನಕ ಇವೆಂಟ್ಸ್‌ನ ಗಣೇಶ ಶೆಟ್ಟಿ, ಸ್ಥಳೀಯ ರೈತರು ಮತ್ತು ಬೆಳೆಗಾರರಿಗೆ ಉಚಿತ ಸ್ಟಾಲ್ ವ್ಯವಸ್ಥೆ ಮಾಡಲಾಗಿದ್ದು, ತಾವು ಬೆಳೆದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಮೇಳದಲ್ಲಿ ಸ್ಥಳೀಯ ಹಣ್ಣುಗಳ ಜೊತೆಗೆ ಕೇರಳದ ವಿಶೇಷ ತಳಿಯ ಹಲಸು ಹಣ್ಣುಗಳು, ಹಲಸಿನ ಜಾಮ್, ಹಲಸಿನ ಉಪ್ಪಿನಕಾಯಿ, ಮಾವಿನ ಜಾಮ್, ಮಾವಿನ ಹೋಳಿಗೆ, ಹಲಸಿನ ಹೋಳಿಗೆ, ಹಲಸಿನ ಜಿಲೇಬಿ ಸೇರಿದಂತೆ ವಿವಿಧ ಖಾದ್ಯಗಳು ಗ್ರಾಹಕರಿಗೆ ಲಭ್ಯವಿರಲಿವೆ. ತುಮಕೂರು ಮತ್ತು ಪಾಂಡೀಚೇರಿಯಿಂದ ವಿಶೇಷ ಆಹಾರ ಉತ್ಪನ್ನಗಳೂ ಮೇಳಕ್ಕೆ ಆಗಮಿಸುತ್ತಿವೆ ಎಂದು ಹೇಳಿದರು.
ಇದೇ ವೇಳೆ ವಿವಿಧ ತರಕಾರಿ ಬೀಜಗಳು, ಹೂವು ಹಾಗೂ ಹಣ್ಣಿನ ಗಿಡಗಳು, ಆಯುರ್ವೇದಿಕ್ ಮತ್ತು ಗೃಹ ತಯಾರಿಕೆಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ.
ಮೇಳದ ಮತ್ತೊಂದು ವಿಶೇಷ ಆಕರ್ಷಣೆಯಾಗಿ ಸೆಲ್ಫಿ ಸ್ಟ್ಯಾಂಡ್ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ಕ್ಲಿಕ್ಕಿಸಿದ ಫೋಟೊವನ್ನು ವಾಟ್ಸ್ಆಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡು ಅತಿ ಹೆಚ್ಚು ವೀಕ್ಷಣೆ ಪಡೆದ ಮೂವರಿಗೆ ಇಳಕಲ್ ಸೀರೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ಅರ್ಜುನ್ ಉಪಾಧ್ಯಾಯ, ಮಾಜಿ ಅಧ್ಯಕ್ಷ ಅಮರನಾಥ ಶೆಟ್ಟಿ, ಪ್ರಸನ್ನ ತೆಂಡೂಲ್ಕರ್, ಅನ್‌ಮೋಲ್ ರೇವಣಕರ್, ವಿನೋದ ಕೊಠಾರಕರ್ ಮತ್ತಿತರರು ಉಪಸ್ಥಿತರಿದ್ದರು.
