ಕರಾವಳಿ ವಾಯ್ಸ್ ನ್ಯೂಸ್ 

ಹೊನ್ನಾವರ: ಕುಟುಂಬದ ಬದುಕಿಗಾಗಿ ಎಂದಿನಂತೆ ಸಮುದ್ರಕ್ಕಿಳಿದ ಮೀನುಗಾರನೊಬ್ಬ, ಅಲೆಗಳ ಅಬ್ಬರಕ್ಕೆ ಬಲಿಯಾಗಿ ಮರಳಿ ಬಾರದ ದುರಂತ ಘಟನೆ ಶನಿವಾರ ಅಪಪ್ಸರಕೊಂಡ ಕಡಲ ತೀರದಲ್ಲಿ ನಡೆದಿದೆ.

ಅಪಪ್ಸರಕೊಂಡ ನಿವಾಸಿ ಚಂದ್ರಕಾಂತ ಲಕ್ಷ್ಮಣ ಖಾರ್ವಿ (38) ಮೃತ ದುರ್ದೈವಿ. ತಾಯಿ, ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳಿಗೆ ಆಸರೆಯಾಗಿದ್ದ ಚಂದ್ರಕಾಂತ ಅವರ ಅಕಾಲಿಕ ನಿಧನ ಕುಟುಂಬವನ್ನು ಶೋಕ ಸಾಗರಕ್ಕೆ ತಳ್ಳಿದೆ.

ಶನಿವಾರ ಬೆಳಿಗ್ಗೆ ಅವರು ಕೇಶವ ರಾಮ ಖಾರ್ವಿ ಅವರ ‘ಶ್ರೀ ರಾಮ’ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮಧ್ಯಾಹ್ನ ಮೀನುಗಾರಿಕೆ ಮುಗಿಸಿ ದಡಕ್ಕೆ ಮರಳುತ್ತಿದ್ದ ವೇಳೆ, ಸಮುದ್ರದಲ್ಲಿ ಏಕಾಏಕಿ ಎದ್ದ ಬೃಹತ್ ಅಲೆಗಳು ದೋಣಿಗೆ ಅಪ್ಪಳಿಸಿವೆ. ಕ್ಷಣಾರ್ಧದಲ್ಲಿ ದೋಣಿ ಮಗುಚಿ ಇಬ್ಬರೂ ನೀರಿಗೆ ಬಿದ್ದಿದ್ದಾರೆ.

ದೋಣಿ ಚಾಲಕ ಕೇಶವ ಖಾರ್ವಿ ದೋಣಿಯನ್ನು ಹಿಡಿದುಕೊಂಡು ಜೀವ ಉಳಿಸಿಕೊಂಡರೂ, ಚಂದ್ರಕಾಂತ ಅವರು ಸಮುದ್ರದ ನೀರು ಕುಡಿದು ಅಸ್ವಸ್ಥರಾಗಿದ್ದರು. ಸಹ ಮೀನುಗಾರ ಕೇಶವ ಅವರು ಹಗ್ಗದ ಸಹಾಯದಿಂದ ಅವರನ್ನು ದಡಕ್ಕೆ ಎಳೆತಂದು ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಟ್ಟಿದ್ದಾರೆ.

ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲು ವೈದ್ಯರು ಸೂಚಿಸಿದ್ದರು. ಆದರೆ ಅಂಬ್ಯುಲೆನ್ಸ್‌ನಲ್ಲಿ ಮಂಗಳೂರಿಗೆ ಸಾಗಿಸುತ್ತಿದ್ದ ವೇಳೆ ಶರಾವತಿ ಸೇತುವೆ ಸಮೀಪ ಚಂದ್ರಕಾಂತ ಅವರ ಉಸಿರು ನಿಂತಿದೆ.

ಬೆಳಿಗ್ಗೆ ಕುಟುಂಬದವರೊಂದಿಗೆ ಮಾತನಾಡಿ ಮೀನುಗಾರಿಕೆಗೆ ತೆರಳಿದ್ದ ಚಂದ್ರಕಾಂತ, ಸಂಜೆ ವೇಳೆಗೆ ಶವವಾಗಿ ಮರಳಿದ ಸುದ್ದಿ ಅಪಪ್ಸರಕೊಂಡ ಗ್ರಾಮದಲ್ಲಿ ಮೌನ ಆವರಿಸಿತು. ಕುಟುಂಬದ ಆಧಾರಸ್ತಂಭವಾಗಿದ್ದ ಅವರ ನಿಧನ ಸ್ಥಳೀಯರ ಕಣ್ಣೀರಿಗೂ ಕಾರಣವಾಯಿತು.

ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

Please Share: