ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಚರಂಡಿಯಲ್ಲಿ ಬಿದ್ದು ಹೊರಬರಲಾಗದೆ ಪರದಾಡುತ್ತಿದ್ದ ಎತ್ತಿನ ಕಿರುಚಾಟ ಕೇಳಿ ಸ್ಥಳೀಯರು ಆತಂಕಗೊಂಡ ಘಟನೆ ನಗರದ ಹಬ್ಬುವಾಡ ರಸ್ತೆಯ ಹರಿದೇವನಗರದಲ್ಲಿ ಗುರುವಾರ ನಡೆದಿದೆ. ಕೆಲಕಾಲ ಜೀವ-ಮರಣ ಹೋರಾಟ ನಡೆಸಿದ ಎತ್ತನ್ನು ಕೊನೆಗೂ ಕಾರವಾರ ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದರು.
ಹರಿದೇವನಗರದ ಚರಂಡಿಯೊಂದರಲ್ಲಿ ಎತ್ತು ಬಿದ್ದಿದ್ದು, ಮೇಲಕ್ಕೆ ಏರಲು ಸಾಧ್ಯವಾಗದೆ ಕಿರುಚುತ್ತಿತ್ತು. ಎತ್ತಿನ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ತಕ್ಷಣವೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ರವಾನಿಸಿದರು.
ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ಅವಲೋಕಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಚರಂಡಿಯೊಳಗೆ ಇಳಿದ ಸಿಬ್ಬಂದಿ ಬೆಲ್ಟ್‌ಗಳನ್ನು ಬಳಸಿ ಎತ್ತನ್ನು ಎಚ್ಚರಿಕೆಯಿಂದ ಕಟ್ಟಿಹಾಕಿ ಮೇಲಕ್ಕೆ ಎತ್ತಿದರು. ಕೆಲ ನಿಮಿಷಗಳ ಕಾರ್ಯಾಚರಣೆಯ ಬಳಿಕ ಎತ್ತನ್ನು ಸುರಕ್ಷಿತವಾಗಿ ಹೊರತೆಗೆದ ಕ್ಷಣ ಸ್ಥಳೀಯರಲ್ಲಿ ನೆಮ್ಮದಿ ಮೂಡಿಸಿತು.
ರಕ್ಷಣೆಯಾದ ಬಳಿಕ ಎತ್ತಿಗೆ ಪ್ರಾಥಮಿಕ ಉಪಚಾರ ನೀಡಲಾಯಿತು. ಸಮಯೋಚಿತವಾಗಿ ಸ್ಪಂದಿಸಿ ಪ್ರಾಣ ಉಳಿಸಿದ ಅಗ್ನಿಶಾಮಕ ಸಿಬ್ಬಂದಿಯ ಕಾರ್ಯವನ್ನು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಗೌಡ ಹಾಗೂ ಸಿಬ್ಬಂದಿಗಳಾದ ಬಸವರಾಜ್ ಉಳ್ಳಾಗಡ್ಡಿ, ರವಿರಾಜ್, ಮಿಥುನ್ ಅಂಕೋಲೆಕರ್ ಮತ್ತು ಕುಮಾರ್ ಕೆ.ಎನ್ ಭಾಗವಹಿಸಿದ್ದರು.
