ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಚಲನ ಮೂಡಿಸಿರುವ ಮೀಟರ್ ಬಡ್ಡಿ ದಂಧೆಯ ಕಿಂಗ್‌ಪಿನ್ ಎಂದು ಗುರುತಿಸಿಕೊಂಡಿದ್ದ ಜಮೀರ್ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಗಂಭೀರವಾಗಿ ಮುಂದುವರಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು ಏಳು ಆರೋಪಿಗಳನ್ನು ಬಂಧಿಸಲಾಗಿದೆ.

ಕೊಲೆ ಪ್ರಕರಣದ ಜೊತೆಗೆ ಜಮೀರ್ ನಡೆಸುತ್ತಿದ್ದ ಎನ್ನಲಾದ ಮೀಟರ್ ಬಡ್ಡಿ ದಂಧೆಯ ಅಂಶವನ್ನೂ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಈ ಜಾಲದ ವ್ಯಾಪ್ತಿ ಹಾಗೂ ಸಂಪರ್ಕಗಳ ಕುರಿತು ಆಳವಾದ ತನಿಖೆ ಆರಂಭಿಸಿದ್ದಾರೆ.

ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದ ತನಿಖಾ ತಂಡ ಜಮೀರ್ ಮೊಬೈಲ್‌ನ್ನು ಪರಿಶೀಲನೆಗೆ ಒಳಪಡಿಸಿದ್ದು, ಅದರ ಕಾಲ್ ಲಿಸ್ಟ್‌, ವಾಟ್ಸಪ್ ಕರೆಗಳು ಹಾಗೂ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಮಾಹಿತಿ ಕಲೆ ಹಾಕುತ್ತಿದೆ ಎನ್ನಲಾಗಿದೆ.

ಜಮೀರ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾದ ಕೆಲ ಪೊಲೀಸರ ಕುರಿತೂ ತನಿಖಾ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ವಾರಕ್ಕೆ ಎರಡು–ಮೂರು ಬಾರಿ ಕರೆ ಮಾಡಿ ಮಾತನಾಡುತ್ತಿದ್ದರೆಂಬ ಶಂಕೆಯ ಮೇರೆಗೆ ಕೆಲ ಪೊಲೀಸ್ ಸಿಬ್ಬಂದಿಯ ಕರೆ ವಿವರಗಳನ್ನೂ ಪರಿಶೀಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರೌಡಿ ಶೀಟರ್ ಹಾಗೂ ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿದ್ದ ಜಮೀರ್ ಜೊತೆ ಕೆಲ ಸ್ಥಳೀಯ ಪೊಲೀಸರು ನೇರ ಅಥವಾ ವಾಟ್ಸಪ್ ಕರೆಗಳ ಮೂಲಕ ಸಂಪರ್ಕದಲ್ಲಿದ್ದರು ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖೆ ಮತ್ತಷ್ಟು ತೀವ್ರಗೊಂಡಿದೆ.

ಜಮೀರ್ ಮೊಬೈಲ್‌ನಲ್ಲಿ ಲಭ್ಯವಾಗಿರುವ ಮಾಹಿತಿ ಹಲವು ಹೊಸ ಬೆಳವಣಿಗೆಗಳಿಗೆ ಕಾರಣವಾಗುವ ಸಾಧ್ಯತೆ ಇದ್ದು, ಸ್ಥಳೀಯ ಪೊಲೀಸ್ ವಲಯದ ಚಿತ್ತ ಇದೀಗ ಜಮೀರ್ ಮೊಬೈಲ್ ಪರಿಶೀಲನೆಯತ್ತ ನೆಟ್ಟಿದೆ.

 

Please Share: