ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಗುಜರಾತ್‌ನಿಂದ ಭಾರೀ ಕನಸು ಹೊತ್ತು ಹೊರಟಿದ್ದ ಕೈಗಾ 5 ಮತ್ತು 6ನೇ ಘಟಕದ ಬೃಹತ್ ಯಂತ್ರೋಪಕರಣ ಸಾಗಾಟ ವಾಹನ, ಗುರಿ ತಲುಪಲು ಇನ್ನೂ ಕೇವಲ ಮೂರು ಕಿಮೀ ಬಾಕಿ ಇರುವಾಗಲೇ “ಇಲ್ಲೇ ಸಾಕು” ಎನ್ನುವಂತೆ ರಸ್ತೆಯಂಚಿಗೆ ಪಲ್ಟಿಯಾದ ಘಟನೆ ಗುರುವಾರ ಹರ್ಟುಗಾ ಗ್ರಾಮದ ಬಳಿ ನಡೆದಿದೆ.
ಕಳೆದ ಫೆಬ್ರುವರಿಯಲ್ಲಿ ಗುಜರಾತ್‌ನಿಂದ ಹೊರಟಿದ್ದ ಈ ಮಹಾಕಾಯ ವಾಹನ, ಏಪ್ರಿಲ್ 15ರಂದು ಕಾರವಾರ ಪ್ರವೇಶಿಸಿ, ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಕೈಗಾ ಮಾರ್ಗದಲ್ಲಿ “ಇಂಚಿಂಚಾಗಿ” ಸಂಚರಿಸುತ್ತಿತ್ತು. ಸ್ಥಳೀಯರು ವಾಹನ ನೋಡುತ್ತಾ “ಇದು ಹೋಗ್ತಿದೆಯೋ… ಇಲ್ಲ ರಸ್ತೆ ಅಳತೆ ತೆಗೆದುಕೊಳ್ಳ್ತಿದೆಯೋ?” ಎಂದು ಚರ್ಚೆ ನಡೆಸುತ್ತಿದ್ದರೆ, ವಾಹನ ಮಾತ್ರ ತನ್ನದೇ ಗಂಭೀರದಲ್ಲಿ ಮುಂದುವರಿಯುತ್ತಿತ್ತು.
ಆದರೆ ಕೈಗಾ ಯೋಜನಾ ಪ್ರದೇಶಕ್ಕೆ ತಲುಪಲು ಕೇವಲ ಮೂರ್ನಾಲ್ಕು ಕಿಮೀ ಬಾಕಿ ಇರುವಾಗ ತಿರುವಿನಲ್ಲಿ ಏಕಾಏಕಿ ಸಮತೋಲನ ಕಳೆದುಕೊಂಡ ವಾಹನ, ರಸ್ತೆ ಪಕ್ಕಕ್ಕೆ ಅಡ್ಡಲಾಗಿ ಬಿದ್ದಿದೆ. ಭಾರೀ ಗಾತ್ರದ ಯಂತ್ರದ ಭಾಗವಾಗಿದ್ದರಿಂದ ವಾಹನ ತಿರುವು ತೆಗೆದುಕೊಳ್ಳುವಾಗಲೇ “ನಾನೇ ದೊಡ್ಡವನು” ಎಂಬಂತೆ ರಸ್ತೆಯನ್ನು ಸಂಪೂರ್ಣ ತನ್ನ ವಶಕ್ಕೆ ತೆಗೆದುಕೊಂಡಂತಾಯಿತು.
ಘಟನೆಯ ಬಳಿಕ ಮಲ್ಲಾಪುರ–ಕೈಗಾ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ವಾಹನ ತೆರವುಗೊಳಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಸ್ಥಳೀಯರು ಮಾತ್ರ “ಇಷ್ಟು ದಿನ ರಸ್ತೆಯನ್ನೇ ಹಿಡಿದು ಬಂದ ವಾಹನ, ಕೊನೆಗೆ ರಸ್ತೆಗೇ ಮಲಗಿಬಿಟ್ಟಿದೆ” ಎಂದು ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ.
ಇನ್ನು ಕೆಲವರು “ಕೈಗಾ ತಲುಪೋದಕ್ಕಿಂತ ಮೊದಲು ವಾಹನಕ್ಕೆ ದಣಿವು ಬಂತೋ ಏನೋ!” ಎಂದು ಚುಟುಕಾಡಿದರೆ, ಮತ್ತೊಬ್ಬರು “ಮೂರು ತಿಂಗಳ ಪ್ರಯಾಣದ ಕ್ಲೈಮ್ಯಾಕ್ಸ್ ಇದೇನಾ?” ಎಂದು ಪ್ರಶ್ನಿಸುತ್ತಿದ್ದಾರೆ.
