ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ನಗರದಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪತ್ನಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Banner Ad

ನೇತ್ರಾವತಿ ಹೋಟೆಲ್ ಹಿಂಭಾಗದ ಬನವಾಸಿ ರಸ್ತೆಯ ನಿವಾಸಿಯಾಗಿರುವ ಅನಿಲ್ ಆನಂದ ನಾಯಕ (59) ಅವರು ಮಂಗಳವಾರ ರಂದು ಬೆಳಿಗ್ಗೆ ಸುಮಾರು 10:30 ಗಂಟೆಗೆ ಮನೆಯಿಂದ ಕೆಲಸದ ನಿಮಿತ್ತ ಹೊರಟು ಹೋದ ಬಳಿಕ ಮನೆಗೆ ಮರಳಿಲ್ಲ ಎಂದು ತಿಳಿದುಬಂದಿದೆ. ಅವರು ಪರಿಚಿತ ವೆಲ್ಡರ್ ಯಾಸಿನ್ ಅಬ್ದುಲ್ ಅಜೀಂಸಾಬ್ ಅವರೊಂದಿಗೆ ಸ್ಕೂಟಿಯಲ್ಲಿ ತೆರಳಿದ್ದರು.

ಮಧ್ಯಾಹ್ನ ಸುಮಾರು 1:30 ಗಂಟೆಗೆ ಪತ್ನಿ ಅನುಶ್ರೀ ಅವರು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಯಾಸಿನ್ ಅವರನ್ನು ಸಂಪರ್ಕಿಸಿದಾಗ, ಅನಿಲ್ ಅವರು ಕೇಂದ್ರೀಯ ಬಸ್ ನಿಲ್ದಾಣದ ಬಳಿ ಸ್ವಲ್ಪ ಕೆಲಸವಿದೆ ಎಂದು ಹೇಳಿ ಇಳಿದಿರುವುದಾಗಿ ಮಾಹಿತಿ ನೀಡಿದ್ದಾರೆ.

ಇದಾದ ಬಳಿಕ ಕುಟುಂಬದವರು ಬಸ್ ನಿಲ್ದಾಣ, ಬಿಡ್ಕಿ, ಐದು ರಸ್ತೆ, ಸಿಪಿ ಬಜಾರ್ ಹಾಗೂ ಬನವಾಸಿ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿಲ್ಲ. ಸಂಬಂಧಿಕರ ಮನೆಗಳಲ್ಲಿಯೂ ವಿಚಾರಿಸಿದರೂ ಯಾವುದೇ ಮಾಹಿತಿ ದೊರೆತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯಾವುದೋ ವೈಯಕ್ತಿಕ ವಿಷಯವನ್ನು ಮನಸ್ಸಿಗೆ ಹಾಕಿಕೊಂಡು, ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಶಿರಸಿ ನಗರ ಪೊಲೀಸರು ಕಾಣೆಯಾದ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದಾರೆ.

Please Share: