ಕರಾವಳಿ ವಾಯ್ಸ್ ನ್ಯೂಸ್ 

ದಾಂಡೇಲಿ: ಐಪಿಎಲ್ ಟಿ-20 ಪಂದ್ಯಾವಳಿಯ ವೇಳೆ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಸುತ್ತಿದ್ದವರ ಮೇಲೆ ದಾಂಡೇಲಿ ನಗರ ಪೊಲೀಸರು ದಾಳಿ ನಡೆಸಿ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಲವರನ್ನು ಬಂಧಿಸಿ ನಗದು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣ 1

ದಾಂಡೇಲಿ ನಗರ ಪೊಲೀಸ್ ಠಾಣೆಯ ಗುನ್ನಾ ಸಂಖ್ಯೆ 51/2026ರಡಿ ಕೆ.ಪಿ. ಆ್ಯಕ್ಟ್ ಕಲಂ 78 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಏಪ್ರಿಲ್ 10, 2026ರಂದು ರಾತ್ರಿ 11.40ರ ಸುಮಾರಿಗೆ ಅಂಬೇವಾಡಿ ಸರ್ಕಾರಿ ಕಾಲೇಜು ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ನಡುವಿನ ಐಪಿಎಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.

ಈ ವೇಳೆ ಅನಿಲ್ ಲಕ್ಷ್ಮಣ ಬಳ್ಳಾರಿ (22), ಬಾಲರಾಜ ನಾಗೇಶ್ ಗಿರಿಯಾಲ್ (20) ಹಾಗೂ ಶ್ರವಣ ಎಂಬ ಆರೋಪಿತರು ಸಿಕ್ಕಿಬಿದ್ದಿದ್ದಾರೆ. ದಾಳಿಯ ಸಂದರ್ಭದಲ್ಲಿ ₹2,500 ನಗದು, ಬೆಟ್ಟಿಂಗ್ ವಿವರಗಳಿರುವ ಹಾಳೆ, ಬಾಲ್ ಪೆನ್, ರಿಯಲ್‌ಮಿ ಮೊಬೈಲ್ (ಸುಮಾರು ₹8,000 ಮೌಲ್ಯ) ಹಾಗೂ ಐಫೋನ್ (ಸುಮಾರು ₹30,000 ಮೌಲ್ಯ) ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ 2

ಇನ್ನೊಂದು ಪ್ರಕರಣದಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಯ ಗುನ್ನಾ ಸಂಖ್ಯೆ 50/2026ರಡಿ ಕೆ.ಪಿ. ಆ್ಯಕ್ಟ್ ಕಲಂ 78(VI) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ದಿನ ರಾತ್ರಿ 11.15ರ ಸುಮಾರಿಗೆ ಅಂಬೇವಾಡಿ ಜಿ-2 ಪ್ರದೇಶದಲ್ಲಿ ಇಮ್ಯಾನುವೆಲ್ ಸ್ವಾಮಿಲ್ ಬೈಲಾ (24) ಹಾಗೂ ಬಸವರಾಜ ಅಲಿಯಾಸ್ ಭರತ ನಾಗೇಶ್ ಗಿರಿಯಾಲ್ (22) ಅವರು ಮೊಬೈಲ್ ಮೂಲಕ ಶ್ರವಣನೊಂದಿಗೆ ಸಂಪರ್ಕದಲ್ಲಿದ್ದು, ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದರು.

ಈ ವೇಳೆ ಪೊಲೀಸರು ದಾಳಿ ನಡೆಸಿ ₹3,000 ನಗದು, ಒಂದು ಆ್ಯಪಲ್ ಮೊಬೈಲ್ ಹಾಗೂ ಬೆಟ್ಟಿಂಗ್ ವಿವರಗಳಿರುವ ಹಾಳೆಯನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿಯೂ ಶ್ರವಣನ ಪಾತ್ರ ಇರುವುದಾಗಿ ತಿಳಿದುಬಂದಿದೆ.

ಎರಡೂ ಪ್ರಕರಣಗಳಲ್ಲಿ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

Please Share: