ಕರಾವಳಿ ವಾಯ್ಸ್ ನ್ಯೂಸ್ 

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರ ಮೇಲೆ ನಡೆದ ಹತ್ಯೆ ಯತ್ನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಆರೋಪಿಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಆಪ್ತರಾಗಿದ್ದ ಗೋಪಾಲಕೃಷ್ಣ ನಾಯಕ ಅವರ ಮೇಲೆ ನಡೆದ ಈ ದಾಳಿ ಪೂರ್ವ ಯೋಜಿತವಾಗಿದ್ದದ್ದು ತನಿಖೆಯಿಂದ ತಿಳಿದುಬಂದಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳೆಲ್ಲರೂ ಗೋವಾ ಮೂಲದವರಾಗಿದ್ದು, ಕಳೆದ ಮೂರು ತಿಂಗಳಿನಿಂದಲೇ ಕೊಲೆಗಾಗಿ ಸ್ಕೆಚ್ ಹಾಕಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ.

ಹಂತಕರು ಅಂಕೋಲಾದಲ್ಲಿಯೇ ಮನೆ ಬಾಡಿಗೆಗೆ ಪಡೆದು ಗೋಪಾಲ ನಾಯಕರ ಚಲನವಲನಗಳ ಮೇಲೆ ನಿಗಾ ಇಟ್ಟುಕೊಂಡಿದ್ದರು. ಸದಾ ಬೆಂಬಲಿಗರು ಹಾಗೂ ಯುವಕರ ಜೊತೆ ಇರುತ್ತಿದ್ದ ಗೋಪಾಲ ನಾಯಕ ಒಬ್ಬಂಟಿಯಾಗಿ ಇರುವ ಸಮಯವನ್ನು ಕಾದು ದಾಳಿ ನಡೆಸಲು ಯೋಜನೆ ರೂಪಿಸಿದ್ದರು.

ನಿನ್ನೆ ಗೋಪಾಲ ನಾಯಕ ಶೇವಿಂಗ್ ಮಾಡಿಸಲು ಒಬ್ಬರೇ ತೆರಳಿದ ವೇಳೆ ಹಂತಕರು ದಾಳಿ ನಡೆಸಿದ್ದಾರೆ. ಆದರೆ ದಾಳಿಯಿಂದ ತಪ್ಪಿಸಿಕೊಂಡ ಅವರು ಸಮೀಪದ ಬ್ಯಾಂಕ್ ಒಂದರೊಳಗೆ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೊಂದೆಡೆ, ಗೋಪಾಲಕೃಷ್ಣ ನಾಯಕರ ಫೋಟೋ ನೀಡಿ ಸುಪಾರಿ ನೀಡಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣದ ಹಿಂದೆ ಸ್ಥಳೀಯರ ಕೈವಾಡವೂ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ರಾಜಕೀಯವಾಗಿ ಬೆಳೆಯುವುದನ್ನು ತಡೆಯಲು ಈ ಸಂಚು ರೂಪಿಸಲಾಗಿದೆವೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರೆದಿದ್ದು, ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಗೋವಾದಲ್ಲಿ ರಾತ್ರಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಪಶ್ಚಿಮ ವಲಯ ಐಜಿಪಿ ಕೂಡ ಕಾರವಾರದಲ್ಲಿಯೇ ಮೊಕ್ಕಾಂ ಹೂಡಿ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Please Share: