ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಆನ್‌ಲೈನ್ ಪಾರ್ಟ್‌ಟೈಮ್ ಕೆಲಸದ ಹೆಸರಿನಲ್ಲಿ ಸೈಬರ್ ವಂಚಕರು ಮಹಿಳೆಯೊಬ್ಬರಿಗೆ ₹7 ಲಕ್ಷಕ್ಕೂ ಅಧಿಕ ಹಣ ವಂಚಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಕಾರವಾರದ ಹೈಚರ್ಚ್ ರಸ್ತೆ ನಿವಾಸಿ ವರ್ಷಾ ವಿ. ರೇವಣಕರ್ (52) ಅವರು ವಂಚನೆಗೆ ಒಳಗಾದವರಾಗಿದ್ದಾರೆ. ಹೆಚ್ಚಿನ ಲಾಭದ ಆಸೆಗೆ ಬಿದ್ದ ಅವರು ಇದೀಗ ತಮ್ಮ ಹಣ ಕಳೆದುಕೊಂಡು ಪೊಲೀಸರ ಮೊರೆ ಹೋಗಿದ್ದಾರೆ.
ಫೆಬ್ರವರಿ 24ರಂದು ವರ್ಷಾ ಅವರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಪ್ ಸಂದೇಶವೊಂದು ಬಂದಿದ್ದು, ಅದರಲ್ಲಿ ‘ಆನ್‌ಲೈನ್ ಪಾರ್ಟ್‌ಟೈಮ್ ಜಾಬ್’ ಕುರಿತು ಮಾಹಿತಿ ನೀಡಲಾಗಿತ್ತು. ಸಂದೇಶದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಒಂದು ವೆಬ್‌ಸೈಟ್ ತೆರೆದಿದ್ದು, ವಿವಿಧ ಕಂಪನಿಗಳ ಉತ್ಪನ್ನಗಳಿಗೆ ರೇಟಿಂಗ್ ಹಾಗೂ ರಿವ್ಯೂ ನೀಡುವ ಕೆಲಸ ಮಾಡಬೇಕೆಂದು ತಿಳಿಸಲಾಗಿತ್ತು. ನಂತರ ಅವರನ್ನು ‘VIP Elite Membership Group’ ಎಂಬ ವಾಟ್ಸಪ್ ಗ್ರೂಪ್‌ಗೆ ಸೇರಿಸಲಾಯಿತು.
ಗ್ರೂಪ್‌ನ ಅಡ್ಮಿನ್ ಆಗಿದ್ದ ‘ಅನನ್ಯ’ ಎಂಬಾಕೆ ವಾಟ್ಸಪ್ ಕರೆ ಮೂಲಕ ಕೆಲಸದ ವಿವರ ನೀಡಿದ್ದು, “ನಾವು ನೀಡುವ ಟಾಸ್ಕ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುತ್ತದೆ” ಎಂದು ಆಮಿಷ ಒಡ್ಡಿದ್ದಳು. ಆರಂಭದಲ್ಲಿ ನಂಬಿಕೆ ಮೂಡಿಸಲು ವರ್ಷಾ ಅವರಿಂದ ₹200 ಹೂಡಿಕೆ ಮಾಡಿಸಿ, ಅವರ ಬ್ಯಾಂಕ್ ಖಾತೆಗೆ ₹300 ಮರಳಿ ಜಮೆ ಮಾಡಲಾಗಿತ್ತು. ಒಂದು ಟಾಸ್ಕ್‌ನಿಂದ ₹100 ಲಾಭ ಸಿಕ್ಕಿರುವುದರಿಂದ ಅವರು ವಂಚಕರ ಮಾತನ್ನು ನಂಬಿದರು.
ನಂತರ ಹಂತ ಹಂತವಾಗಿ ದೊಡ್ಡ ಮೊತ್ತ ಹೂಡಿಕೆ ಮಾಡಿದರೆ ಲಕ್ಷಾಂತರ ರೂಪಾಯಿ ಲಾಭ ಸಿಗಲಿದೆ ಎಂದು ನಂಬಿಸಿ, ಫೆಬ್ರವರಿ 27ರಿಂದ ಮಾರ್ಚ್ 2ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹7,02,000 ಹಣ ವರ್ಗಾಯಿಸಲು ವಂಚಕರು ಪ್ರೇರೇಪಿಸಿದ್ದಾರೆ. ಆದರೆ ಇಷ್ಟು ದೊಡ್ಡ ಮೊತ್ತ ಪಡೆದ ಬಳಿಕ ಲಾಭದ ಹಣವನ್ನೂ ನೀಡದೆ, ಅಸಲು ಹಣವನ್ನೂ ಹಿಂದಿರುಗಿಸದೆ ವಂಚಕರು ಸಂಪರ್ಕ ಕಡಿತಗೊಳಿಸಿದ್ದಾರೆ.
ತಮ್ಮ ಮೇಲೆ ವಂಚನೆ ನಡೆದಿರುವುದು ತಿಳಿಯುತ್ತಿದ್ದಂತೆಯೇ ವರ್ಷಾ ಅವರು ಕಾರವಾರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಐಟಿ ಕಾಯ್ದೆ 2000ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
