ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ತಾಲೂಕಿನ ಬೊಬ್ರವಾಡ ಜಾಮಿಯಾ ಮಸೀದಿಯಿಂದ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ಧ್ವಜ ಹಾರಿಸಿದ ಆರೋಪದಡಿ ಬಂಧಿಸಲ್ಪಟ್ಟ ವಿಠ್ಠಲಘಾಟ್ ನಿವಾಸಿ ಮಹಮ್ಮದ್ ರಜಾ ಮಹಮ್ಮದ್ ಅಕ್ಬರ್ ಶೇಖ್ ಅವರಿಗೆ ನ್ಯಾಯಾಲಯ ಸೆಪ್ಟೆಂಬರ್ 9ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈದ್ ಮಿಲಾದ್ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಹಲವು ಬಗೆಯ ಧ್ವಜಗಳನ್ನು ಪ್ರದರ್ಶಿಸಲಾಗಿತ್ತು. ಅವುಗಳಲ್ಲಿ ಧಾರ್ಮಿಕ ಆಚರಣೆಗೆ ಸಂಬಂಧಿಸಿದ ಧ್ವಜಗಳ ಪ್ರದರ್ಶನದ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತವಾಗಿರಲಿಲ್ಲ.

ಆದರೆ ಮೆರವಣಿಗೆ ಸಾಗುತ್ತಿದ್ದ ವೇಳೆ ಯುವಕರ ಗುಂಪೊಂದು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸಾಗಿತ್ತು. ಈ ಸಂದರ್ಭದಲ್ಲಿ ಹಾರಿಸಲಾಗುತ್ತಿದ್ದ ಧ್ವಜವೊಂದು ಪ್ಯಾಲೆಸ್ಟೈನ್ ದೇಶದ ಧ್ವಜವಾಗಿರುವುದು ಕೆಲವರ ಗಮನಕ್ಕೆ ಬಂದಿದೆ. ವಿಷಯವನ್ನು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಗಮನಕ್ಕೆ ತರಲಾಗಿದ್ದು, ಅಂಕೋಲಾ ಪೊಲೀಸ್ ನಿರೀಕ್ಷಕರು ಸ್ಥಳಕ್ಕೆ ತೆರಳಿ ಧ್ವಜವನ್ನು ವಶಕ್ಕೆ ಪಡೆದಿದ್ದರು. ಯಾವುದೇ ರೀತಿಯ ಉದ್ವಿಗ್ನ ಪರಿಸ್ಥಿತಿ ಉಂಟಾಗದಂತೆ ಪೊಲೀಸರು ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು.
ಮೆರವಣಿಗೆ ಮುಕ್ತಾಯಗೊಂಡ ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು. ತನಿಖೆಯ ಭಾಗವಾಗಿ ಮೆರವಣಿಗೆ ನಡೆದ ಪ್ರಮುಖ ಸ್ಥಳಗಳಿಗೆ ಆರೋಪಿಯನ್ನು ಕರೆದೊಯ್ದ ಪೊಲೀಸರು ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಇದರ ಜೊತೆಗೆ ಪ್ಯಾಲೆಸ್ಟೈನ್ ಧ್ವಜವನ್ನು ಎಲ್ಲಿಂದ ತರಲಾಗಿತ್ತು ಎಂಬ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಧ್ವಜವನ್ನು ಸ್ಥಳೀಯವಾಗಿಯೇ ಬಟ್ಟೆ ಖರೀದಿಸಿ ತಯಾರಿಸಲಾಗಿತ್ತೇ ಎಂಬ ಸಾಧ್ಯತೆಯನ್ನೂ ತನಿಖೆಯ ವ್ಯಾಪ್ತಿಯಲ್ಲಿ ಪರಿಶೀಲಿಸಲಾಗುತ್ತಿದೆ.

ಘಟನೆ ನಡೆದ ತಕ್ಷಣದಿಂದಲೇ ಪೊಲೀಸರು ಪ್ರಕರಣದ ತನಿಖೆಯಲ್ಲಿ ಚುರುಕು ತೋರಿಸಿದ್ದು, ಘಟನೆಯ ಹಿನ್ನೆಲೆ ಹಾಗೂ ಧ್ವಜದ ಮೂಲ ಸೇರಿದಂತೆ ವಿವಿಧ ಅಂಶಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಸೆ.9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.
