ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕೆಲ ತಿಂಗಳ ಹಿಂದೆ ಕಾರವಾರ ಕಾರಾಗೃಹದಲ್ಲಿ ಗಾಂಜಾ, ಮೊಬೈಲ್ ಸೇರಿದಂತೆ ವಿವಿಧ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದ ಬೆನ್ನಲ್ಲೇ ಇದೀಗ ಮತ್ತೆ ಜೈಲಿನ ಒಳಗೆ ಮಾದಕ ವಸ್ತು ಸಾಗಾಟ ಮಾಡಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ನಾಲ್ವರ ವಿರುದ್ಧ ಕಾರವಾರ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಹಮದ್ ಮಂಜೂರ್ ಅಬ್ದುಲ್ ಕರೀಂ ಅವರನ್ನು ಭೇಟಿಯಾಗಲು ಭಟ್ಕಳದಿಂದ ಮೊಹಮದ್ ಅಲಿ ಅಬ್ದುಲ್ ಕರಿ ಹಾಗೂ ಹಾರೂನ್ ಸಯ್ಯದ್ ಅಹಮದ್ ಮಾರ್ಚ್ 4ರ ಸಂಜೆ ಸುಮಾರು 5 ಗಂಟೆಗೆ ಜೈಲಿಗೆ ಬಂದಿದ್ದರು. ಭೇಟಿಯ ವೇಳೆ ಅವರು ಮೂರು ಸಣ್ಣ ಚೀಟಿಗಳಲ್ಲಿ ನಿಷೇಧಿತ ತಂಬಾಕು ಕಟ್ಟಿಕೊಂಡು ಒಳಗೆ ಸಾಗಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಭೇಟಿಯ ಸಮಯದಲ್ಲಿ ಆ ತಂಬಾಕು ಚೀಟಿಗಳನ್ನು ಕೈದಿ ಮಹಮದ್ ಮಂಜೂರ್ ಅಬ್ದುಲ್ ಕರೀಂ ಅವರ ಕೈಗೆ ನೀಡಲಾಗಿದ್ದು, ನಂತರ ಅದನ್ನು ಮತ್ತೊಬ್ಬ ಕೈದಿ ಪ್ರಶಾಂತ ನಿಖಿಲ್ ಪವಾರ್ ಅವರಿಗೆ ಹಸ್ತಾಂತರಿಸಲಾಗಿತ್ತು. ಈ ವೇಳೆ ಪ್ರಶಾಂತ ನಿಖಿಲ್ ಪವಾರ್ ಅವರು ಫೋನ್ ಮಾಡಲು ಜೈಲಿನ ಮುಖ್ಯ ದ್ವಾರ ಭಾಗಕ್ಕೆ ತೆರಳಿದ್ದರು.
ಈ ಎಲ್ಲಾ ಬೆಳವಣಿಗೆಗಳು ಜೈಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದನ್ನು ಗಮನಿಸುತ್ತಿದ್ದ ಜೈಲು ಸಿಬ್ಬಂದಿ ಶ್ರೀಧರ ಎಸ್. ಸನಗೌಡರ್ ತಕ್ಷಣ ತಪಾಸಣಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಮಾಹಿತಿ ಮೇರೆಗೆ ಮುಖ್ಯ ದ್ವಾರ ಬಳಿ ಇದ್ದ ಕೈದಿ ಪ್ರಶಾಂತ ನಿಖಿಲ್ ಪವಾರ್ ಅವರನ್ನು ಸಿಬ್ಬಂದಿ ಮಂಜುನಾಥ ಹಡಪದ ತಪಾಸಣೆ ನಡೆಸಿದಾಗ, ಅವರ ಬಳಿ ಇದ್ದ ಮೂರು ಚೀಟಿಗಳನ್ನು ಅವರು ಬಿಸಾಡಿದ್ದಾರೆ. ನಂತರ ಅವನ್ನು ಪರಿಶೀಲಿಸಿದಾಗ ನಿಷೇಧಿತ ತಂಬಾಕು ಇರುವುದಾಗಿ ತಿಳಿದುಬಂದಿದೆ.
ತಕ್ಷಣ ಜೈಲು ಸಿಬ್ಬಂದಿ ಆ ತಂಬಾಕುಗಳನ್ನು ಜಪ್ತಿ ಮಾಡಿದರು. ಈ ಸಂಬಂಧ ಜೈಲಿನ ಒಳಗೆ ನಿಷೇಧಿತ ವಸ್ತು ಸಾಗಾಟ ಮಾಡಲು ಯತ್ನಿಸಿದ ಕೈದಿಗಳಾದ ಮಹಮದ್ ಮಂಜೂರ್ ಅಬ್ದುಲ್ ಕರೀಂ, ಪ್ರಶಾಂತ ನಿಖಿಲ್ ಪವಾರ್ ಹಾಗೂ ಕೈದಿಗಳನ್ನು ಭೇಟಿಯಾಗಲು ಬಂದಿದ್ದ ಮೊಹಮದ್ ಅಲಿ ಅಬ್ದುಲ್ ಕರಿ ಮತ್ತು ಹಾರೂನ್ ಸಯ್ಯದ್ ಅಹಮದ್ ವಿರುದ್ಧ ಕಾರಾಗೃಹದ ಸುಪ್ರೀಡೆಂಟ್ ಹೇಮಾವತಿ ಜಿ ಅವರು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
