ಕರಾವಳಿ ವಾಯ್ಸ್ ನ್ಯೂಸ್
ಮುಂಡಗೋಡ: ಮಧ್ಯಾಹ್ನದ ಊಟ ಮುಗಿಸಿಕೊಂಡು ಎಂದಿನಂತೆ ತರಗತಿಗಳತ್ತ ಹೆಜ್ಜೆ ಹಾಕುತ್ತಿದ್ದ ವಿದ್ಯಾರ್ಥಿಗಳಿಗೆ ಕೆಲವೇ ಕ್ಷಣಗಳಲ್ಲಿ ಭಯಾನಕ ಅನುಭವ ಎದುರಾಯಿತು. ತಾಲೂಕಿನ ಕರಗಿನಕೊಪ್ಪದ ಮೊರಾರ್ಜಿ ವಸತಿ ಶಾಲೆಯಲ್ಲಿ ಜೇನುಹುಳುಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ 21 ವಿದ್ಯಾರ್ಥಿಗಳು ಅಸ್ವಸ್ಥರಾಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ವಸತಿ ಶಾಲೆಯ ಎರಡನೇ ಮಹಡಿಯಲ್ಲಿ ಜೇನುಹುಳಗಳ ದೊಡ್ಡ ಗೂಡು ನಿರ್ಮಾಣವಾಗಿತ್ತು. ಮಧ್ಯಾಹ್ನದ ಸಮಯದಲ್ಲಿ ವಿದ್ಯಾರ್ಥಿಗಳು ತರಗತಿಗೆ ತೆರಳುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಆಟವಾಡುವ ಉದ್ದೇಶದಿಂದ ಗೂಡಿಗೆ ಕಲ್ಲು ತೂರಿದ್ದಾನೆ ಎನ್ನಲಾಗಿದೆ. ಇದರಿಂದ ಕೆರಳಿದ ಜೇನುಹುಳುಗಳು ಕ್ಷಣಾರ್ಧದಲ್ಲೇ ಗುಂಪಾಗಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿವೆ.
ದಾಳಿಯಿಂದ ಬೆಚ್ಚಿಬಿದ್ದ ಮಕ್ಕಳು ಕಿರುಚುತ್ತಾ ಓಡಾಡಿದ ದೃಶ್ಯ ಕೆಲ ಹೊತ್ತು ಶಾಲಾ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಿಸಿತು. ಕೆಲ ವಿದ್ಯಾರ್ಥಿಗಳು ಮುಖ, ಕೈ, ಕುತ್ತಿಗೆ ಭಾಗಗಳಲ್ಲಿ ಜೇನುಹುಳಗಳ ಕಚ್ಚುವಿಕೆಯಿಂದ ನೋವಿನಿಂದ ಅಳುತ್ತಿದ್ದರೆ, ಇನ್ನು ಕೆಲವರು ಭಯದಿಂದ ನಡುಗುತ್ತಿದ್ದರು. ಪರಿಸ್ಥಿತಿಯನ್ನು ಗಮನಿಸಿದ ಶಿಕ್ಷಕರು ಹಾಗೂ ಸಿಬ್ಬಂದಿ ತಕ್ಷಣ ಮಕ್ಕಳ ನೆರವಿಗೆ ಧಾವಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.
ಅಸ್ವಸ್ಥಗೊಂಡ 21 ವಿದ್ಯಾರ್ಥಿಗಳನ್ನು ತಕ್ಷಣವೇ ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆಸ್ಪತ್ರೆಯಲ್ಲಿ ಕೆಲ ಮಕ್ಕಳು ನೋವಿನಿಂದ ಅಳುತ್ತಿದ್ದರೆ, ಪೋಷಕರಿಗೆ ಮಾಹಿತಿ ತಲುಪಿದ ನಂತರ ಹಲವರು ಆತಂಕದಿಂದ ಆಸ್ಪತ್ರೆಗೆ ಧಾವಿಸಿದರು. ಮಕ್ಕಳನ್ನು ಸಮಾಧಾನಪಡಿಸಲು ಶಿಕ್ಷಕರು ಹಾಗೂ ವೈದ್ಯರು ಸಾಕಷ್ಟು ಹರಸಾಹಸ ಪಟ್ಟರು.
ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸ್ವರೂಪರಾಣಿ ಪಾಟೀಲ ಮಾತನಾಡಿ, “ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಕೆಲವರಿಗೆ ಚಿಕಿತ್ಸೆ ನೀಡಿ ಸಂಜೆಯೊಳಗೆ ಬಿಡುಗಡೆ ಮಾಡಲಾಗುತ್ತದೆ. ಇನ್ನೂ ಕೆಲವು ಮಕ್ಕಳನ್ನು ಮುಂಜಾಗ್ರತಾ ಕ್ರಮವಾಗಿ ನಾಳೆಯವರೆಗೆ ನಿಗಾದಲ್ಲಿ ಇಡಲಾಗುವುದು,” ಎಂದು ತಿಳಿಸಿದ್ದಾರೆ.
ಒಂದು ಕ್ಷಣದ ಅಜಾಗರೂಕತೆಯಿಂದ ಶಾಲೆಯಲ್ಲಿ ದೊಡ್ಡ ಅನಾಹುತವೇ ಸಂಭವಿಸುವ ಸ್ಥಿತಿ ನಿರ್ಮಾಣವಾಗಿದ್ದು, ಈ ಘಟನೆ ವಿದ್ಯಾರ್ಥಿಗಳಲ್ಲೂ, ಪೋಷಕರಲ್ಲೂ ಆತಂಕ ಮೂಡಿಸಿದೆ. ಶಾಲಾ ಕಟ್ಟಡಗಳ ಸುತ್ತಮುತ್ತ ಇರುವ ಜೇನುಹುಳಗಳ ಗೂಡು ಹಾಗೂ ಇತರ ಅಪಾಯಕಾರಿ ಅಂಶಗಳನ್ನು ಮುಂಚಿತವಾಗಿ ತೆರವುಗೊಳಿಸುವ ಅಗತ್ಯವಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ವಿಡಿಯೋ ಸುದ್ದಿಗಾಗಿ ಈ ಲಿಂಕ್ ಓಪನ್ ಮಾಡಿ:
