ಕರಾವಳಿ ವಾಯ್ಸ್ ನ್ಯೂಸ್
ಯಲ್ಲಾಪುರ: ನಂಬಿಕೆ ದುರುಪಯೋಗಪಡಿಸಿಕೊಂಡು ವಾಹನವನ್ನು ತೆಗೆದುಕೊಂಡು ಹೋಗಿ ಮರಳಿ ನೀಡದೆ ಮೋಸ ಮಾಡಿದ ಆರೋಪದ ಮೇಲೆ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಈ ಕುರಿತು ತಟಗಾರ ಕ್ರಾಸ್ ನಿವಾಸಿ ಮಂಜುನಾಥ ಗಂಗಾಧರ ಪಿಳ್ಳೆ (45) ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಮುಂಡಗೋಡ ತಾಲೂಕಿನ ಹನುಮಾಪುರ ನಿವಾಸಿ ಸತೀಶ ವಾಲ್ಮೀಕಿ (25) ಎಂದು ಗುರುತಿಸಲಾಗಿದೆ.
ದೂರಿನ ಪ್ರಕಾರ, ಸತೀಶನು ಮಂಜುನಾಥ ಅವರ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದನು. ಮಂಜುನಾಥ ಅವರು ವಿಶ್ವನಾಥ ಎಂಬವರಿಂದ ಮೌಖಿಕ ಒಪ್ಪಂದದ ಮೂಲಕ ಪಡೆದಿದ್ದ ವಾಹನವನ್ನು ಬಳಿಕ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಈ ವಾಹನದ ಜವಾಬ್ದಾರಿಯನ್ನು ಚಾಲಕನಾದ ಸತೀಶನಿಗೆ ಒಪ್ಪಿಸಲಾಗಿತ್ತು.
ಡಿಸೆಂಬರ್ 27, 2025ರಂದು ರಾತ್ರಿ ಸುಮಾರು 11:30ರ ವೇಳೆಗೆ ಯಲ್ಲಾಪುರದ ಹುಲಗೋಡ-ಶೀಡ್ಲಗುಂಡಿ ಬಳಿ ಇದ್ದಾಗ, ಸತೀಶನು ತುರ್ತಾಗಿ ಮನೆಗೆ ಹೋಗಬೇಕೆಂದು ಹೇಳಿ ವಾಹನವನ್ನು ತೆಗೆದುಕೊಂಡು ಹೋಗಿದ್ದಾನೆ. ಈ ವೇಳೆ ಮಂಜುನಾಥ ಅವರು ಸ್ನೇಹಿತ ಸೈಯ್ಯದ ಸಾಧಿಕ್ ಅವರ ಬೈಕ್‌ನಲ್ಲಿ ಹಿಂದಿರುಗಿದ್ದಾರೆ.
ಆದರೆ ಬಳಿಕ ಆರೋಪಿತನು ವಾಹನವನ್ನು ಮರಳಿ ನೀಡದೇ, ಯಾವುದೇ ಸಂಪರ್ಕ ಸಾಧಿಸದೆ ಇರುವುದರಿಂದ ಅನುಮಾನ ಮೂಡಿದೆ. ನಂತರ ಮಂಜುನಾಥ ಅವರು ಸ್ನೇಹಿತರಾದ ಅಬ್ದುಲ್ ವಹಾಬ್ ಹಾಗೂ ಸೈಯ್ಯದ ಸಾಧಿಕ್ ಅವರೊಂದಿಗೆ ಆರೋಪಿತನ ಮನೆಗೆ ತೆರಳಿ ವಿಚಾರಿಸಿದಾಗ, ಅಲ್ಲಿದ್ದ ಮಹಿಳೆ ಆರೋಪಿತನು ಇಲ್ಲ ಎಂದು ತಿಳಿಸಿ, ಮತ್ತೆ ವಿಚಾರಿಸಲು ಬಂದರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದರೆಂದು ದೂರಿನಲ್ಲಿ ಹೇಳಲಾಗಿದೆ.
ಇದಾದ ಬಳಿಕ ಯಲ್ಲಾಪುರ, ಶಿರಸಿ, ಮುಂಡಗೋಡ ಹಾಗೂ ಹುಬ್ಬಳ್ಳಿ ಭಾಗಗಳಲ್ಲಿ ವಾಹನಕ್ಕಾಗಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ, ಚಾಲಕನು ನಂಬಿಕೆ ಪಡೆದು ವಾಹನವನ್ನು ವಾಪಸ್ ನೀಡದೇ ಮೋಸ ಮಾಡಿದ ಆರೋಪದಡಿ ಮಂಜುನಾಥ ಅವರು ನ್ಯಾಯಾಲಯದ ಮೂಲಕ ದೂರು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 318(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

